ಶ್ರೀನಗರ:ಜೂನ್-1: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದಿರುವ ಉಗ್ರರು ಭದ್ರತಾಪಡೆ ವಾಹನಗಳ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ಇಲ್ಲಿನ ಪುಲ್ವಾಮದಲ್ಲಿ ಸೇನಾ ವಾಹನಗಳ ಮೇಲೆ ಗ್ರೆನೇಡ್ ದಾಳಿ ನಡೆಸಿರ್ವ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಪುಲ್ವಾಮದ ಈದ್ಗಾ ಬಳಿ 183 ಸಿಆರ್’ಪಿಎಫ್ ಬೆಟಾಲಿಯನ್ ಪಡೆಯ ವಾಹನ ತೆರಳುತ್ತಿತ್ತು. ಈ ವೇಳೆ ಸ್ಥಳಕ್ಕೆ ಬಂದಿರುವ ಉಗ್ರರು ಏಕಾಏಕಿ ಭದ್ರತಾ ಪಡೆಗಳ ಮೇಲೆ ಗುಂಡಿನ ಹಾಗೂ ಗ್ನೆನೇಡ್ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಉಗ್ರರು ದಾಳಿ ನಡೆಸುತ್ತಿದ್ದಂತೆಯೇ ಸಿಆರ್’ಪಿಎಫ್ ಪಡೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸ್ಥಳವನ್ನು ಸುತ್ತುವರೆದಿದ್ದು, ಕಾರ್ಯಾಚರಣೆ ನಡೆಸಲು ಆರಂಭಿಸಿದ್ದಾರೆ. ಕಾರ್ಯಾಚರಣೆ ವೇಳೆ ಸ್ಫೋಟಕ ವಸ್ತುಗಳನ್ನು ತುಂಬಿಟ್ಟಿದ್ದ 3 ಬ್ಯಾಗ್’ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.