ಕೌಲಾಲಂಪೂರ್, ಮೇ 31-ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಲೇಷ್ಯಾದಲ್ಲಿ ನೂತನವಾಗಿ ಚುನಾಯಿತರಾದ ತಮ್ಮ ಸಹವರ್ತಿ ಮಹತೀರ್ ಮಹಮದ್ ಅವರನ್ನು ಭೇಟಿ ಮಾಡಿ ಬಾಂಧವ್ಯ ಬಲವರ್ದನೆ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು.
ಇಂಡೋನೆಷ್ಯಾದ ಯಶಸ್ವಿ ಪ್ರವಾಸದ ನಂತರ ಇಂದು ಬೆಳಗ್ಗೆ ಮಲೇಷ್ಯಾಗೆ ಆಗಮಿಸಿದ ಅವರು ಪುತ್ರ ಜಯ ನಗರದಲ್ಲಿ ನೂತನ ಪ್ರಧಾನಿ 92 ವರ್ಷದ ಮಹತೀರ್ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಪಾಲುದಾರಿಕೆ ಸಂಬಂಧ ಬಲವರ್ಧನೆಗಾಗಿ ಮೋದಿ ಉತ್ಪಾದಕ ಮಾತುಕತೆ ವಿನಿಮಯ ನಡೆಸಿದರು. ಭಾರತ ಮತ್ತು ಮಲೇಷ್ಯಾ ನಡುವೆ ಪರಸ್ಪರ ಆರ್ಥಿಕ ಮತ್ತು ಸಾಂಸ್ಕøತಿಕ ಸಹಕಾರ ವರ್ಧನೆ ಕುರಿತು ಉಭಯ ನಾಯಕರು ಸಮಾಲೋಚಿಸಿದರು.
ಡಾ. ಮಹತೀರ್ ಮಹಮದ್ ಅವರನ್ನು ಭೇಟಿಯಾಗಿದ್ದಕ್ಕೆ ಸಂತೋಷವಾಗಿದೆ. ಅವರು ನನಗೆ ನೀಡಿದ ಭವ್ಯ ಸ್ವಾಗತಕ್ಕಾಗಿ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಭಾರತ-ಮಲೇಷ್ಯಾ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ನಾವು ಮಹತ್ವದ ಚರ್ಚೆ ನಡೆಸಿದೆವು ಎಂದು ಪ್ರಧಾನಿ ಟ್ವಿಟ್ ಮಾಡಿದ್ಧಾರೆ.
ವಿಶ್ವದ ಅತ್ಯಂತ ಹಿರಿಯ ನಾಯಕರಾದ ಮಹತೀರ್ ಅವರನ್ನು ಭೇಟಿ ಮಾಡಿದ ವಿಶ್ವದ ಮುಖಂಡರಲ್ಲಿ ಮೋದಿ ಪ್ರಮುಖರಾಗಿದ್ದಾರೆ. ನಿನ್ನೆ ಇಂಡೋನೆಷ್ಯಾ ಪ್ರವಾಸದ ನಂತರ ಇಂದು ಮಲೇಷ್ಯಾಕ್ಕೆ ಲಘು ಭೇಟಿ ನೀಡಿದ ಮೋದಿ ನಂತರ ಸಿಂಗಪುರ್ಗೆ ಪ್ರಯಾಣ ಬೆಳೆಸಿದರು.