
ಬೆಂಗಳೂರು, ಮೇ 31- ರಾಜ್ಯ ವಿಧಾನಸಭೆ ಸದಸ್ಯರಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಇಂದು ಬಿಜೆಪಿಯಿಂದ 5, ಕಾಂಗ್ರೆಸ್ 4 ಹಾಗೂ ಜೆಡಿಎಸ್‍ನಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ವಿಧಾನಸಭೆ ಜಂಟಿ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ತಿನ ಚುನಾವಣಾಧಿಕಾರಿ ಎಂ.ಎಸ್.ಕುಮಾರಸ್ವಾಮಿ ಅವರಿಗೆ 11 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಇಂದು ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿಯಾಗಿ ರಘುನಾಥ್ ಮಲ್ಕಾಪುರೆ, ಎನ್.ರವಿಕುಮಾರ್, ತೇಜಸ್ವಿನಿಗೌಡ, ಕೆ.ಪಿ.ನಂಜುಂಡಿ, ಎಸ್.ರುದ್ರೇಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಗೋವಿಂದರಾಜು, ಸಿ.ಎಂ.ಇಬ್ರಾಹಿಂ, ಅರವಿಂದಕುಮಾರ್ ಅರಳಿ, ಕೆ.ಹರೀಶ್‍ಕುಮಾರ್ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಎಂ.ಫಾರೂಕ್ ಹಾಗೂ ಧರ್ಮೇಗೌಡ ಅವರು ನಾಮಪತ್ರ ಸಲ್ಲಿಸಿದರು.
ವಿಧಾನಪರಿಷತ್‍ನ 11 ಸ್ಥಾನಗಳಿಗೆ ಕಳೆದೊಂದು ವಾರದಿಂದ ಯಾವೊಂದು ನಾಮಪತ್ರವೂ ಸಲ್ಲಿಕೆಯಾಗಿರಲಿಲ್ಲ. ಕಡೆಯ ದಿನವಾಗಿದ್ದ ಇಂದು ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ವಿಧಾನಸಭೆಯಲ್ಲಿ ರಾಜಕೀಯ ಪಕ್ಷಗಳು ಹೊಂದಿರುವ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ಐದು, ಕಾಂಗ್ರೆಸ್ ನಾಲ್ಕು ಹಾಗೂ ಜೆಡಿಎಸ್ ಎರಡು ಸ್ಥಾನಗಳನ್ನು ಗೆಲ್ಲಬಹುದಾಗಿದೆ.
ಮೂರು ರಾಜಕೀಯ ಪಕ್ಷಗಳಲ್ಲಿ ಹೆಚ್ಚುವರಿಯಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಕಡಿಮೆ ಇದ್ದು, ಬಹುತೇಕ ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳಿವೆ.
ಇದುವರೆಗೂ ಪಕ್ಷೇತರ ಅಭ್ಯರ್ಥಿಗಳು ಕೂಡ ನಾಮಪತ್ರ ಸಲ್ಲಿಸಿಲ್ಲ. ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳನ್ನು ಹೊರತುಪಡಿಸಿ ಬೇರೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಅವಿರೋಧ ಆಯ್ಕೆ ಆಗುವ ಸಾಧ್ಯತೆಯೇ ಹೆಚ್ಚಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಜೂ.4ರವರೆಗೂ ಕಾಲಾವಕಾಶವಿದೆ. ಆನಂತರ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.
ಒಂದು ವೇಳೆ ಚುನಾವಣೆ ನಡೆಯುವುದು ಅನಿವಾರ್ಯವಾದರೆ ಜೂ.11ರಂದು ಮತದಾನ ನಡೆದು, ಅಂದು ಸಂಜೆಯೇ ಮತ ಎಣಿಕೆ ಹಾಗೂ ಫಲಿತಾಂಶವು ಹೊರ ಬೀಳಲಿದೆ.
ವಿಧಾನಪರಿಷತ್ ಸದಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ಎಂ.ಆರ್.ಸೀತಾರಾಮ್, ಮೋಟಮ್ಮ, ಡಿ.ಎಸ್.ವೀರಯ್ಯ, ಸಯ್ಯದ್ ಮುಧೀರ್ ಆಘ, ಸೋಮಣ್ಣ ಬೇವಿನಮರದ, ರಘುನಾಥ್ ರಾವ್ ಮಲ್ಕಾಪುರೆ, ಭಾನುಪ್ರಕಾಶ್, ಸಿ.ಎಂ.ಇಬ್ರಾಹಿಂ, ಕೆ.ಗೋವಿಂದರಾಜು, ಬಿ.ಎಸ್.ಸುರೇಶ್ ಅವರು ಜೂ.17ರಂದು ನಿವೃತ್ತಿಯಾಗುತ್ತಿದ್ದು, ಇದರಿಂದ ತೆರವಾಗುವ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.