ಕೆಡಿಎಲ್‍ಡಬ್ಲ್ಯುಡಿಎಸ್ ಉಗ್ರಾಣಗಳಲ್ಲಿ ಔಷಧಿಗಳ ತೀವ್ರ ಕೊರತೆ

 

ಬೆಂಗಳೂರು, ಮೇ 31- ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಿಗೆ ಕಡಿಮೆ ದರದಲ್ಲಿ ಔಷಧಿಗಳನ್ನು ಖರೀದಿಸಿ ಪೂರೈಸುವ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿ(ಕೆಡಿಎಲ್‍ಡಬ್ಲ್ಯುಡಿಎಸ್) ಉಗ್ರಾಣಗಳಲ್ಲಿ ಔಷಧಿಗಳ ತೀವ್ರ ಕೊರತೆ ಎದುರಾಗಿದೆ. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಮತ್ತು ಜೀವರಕ್ಷಕ ಔಷಧಿಗಳು ಲಭಿಸದೆ ಬಡ ರೋಗಿಗಳು ನರಳುವಂತಾಗಿದೆ.

ಕೆಡಿಎಲ್‍ಡಬ್ಲ್ಯುಡಿಎಸ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಡಿ ಬರುವ ಆರೋಗ್ಯ ಸಂಸ್ಥೆಗಳಿಗೆ ಉತ್ತಮ ಗುಣಮಟ್ಟದ ಔಷಧಿ, ರಾಸಾಯನಿಕಗಳು ಸಾಧನ-ಸಲಕರಣೆ ಇತ್ಯಾದಿಯನ್ನು ಕಡಿಮೆ ದರದಲ್ಲಿ ಖರೀದಿಸುತ್ತದೆ. ಆಯಾ ಸಂಸ್ಥೆಗಳ ಬೇಡಿಕೆಗಳಿಗೆ ಅನುಗುಣವಾಗಿ ಎಲ್ಲ ಆರೋಗ್ಯ ಆರೋಗ್ಯ ಕೇಂದ್ರಗಳಲ್ಲಿ ಎಲ್ಲ ಕಾಲದಲ್ಲೂ ಲಭ್ಯವಿರುವಂತೆ ಖರೀದಿಸಿ ವಿತರಿಸುವ ಕಾರ್ಯ ನಿರ್ವಹಿಸುತ್ತದೆ.
ಆದರೆ ಇಷ್ಟೆಲ್ಲ ಉತ್ತಮ ವ್ಯವಸ್ಥೆ ಇದ್ದರೂ ಅಗತ್ಯವಿದ್ದವರಿಗೆ ಔಷಧಿಗಳ ಪೂರೈಕೆಗೆ ಸೊಸೈಟಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಉನ್ನತ ವರ್ಗದವರಿಂದ ಅಡ್ಡಿಯಾಗುತ್ತಿದೆ ಎಂದು ಆರೋಪಗಳು ಕೇಳಿಬರುತ್ತಿವೆ.

ಕೆಡಿಎಲ್‍ಡಬ್ಲ್ಯುಡಿಎಸ್ ರಾಜ್ಯದಲ್ಲಿ ಒಟ್ಟು 26 ಉಗ್ರಾಣಗಳನ್ನು ಹೊಂದಿದ್ದು , ಅಗತ್ಯವಿರುವ ಬಹುಮುಖ್ಯ ಔಷಧಗಳು ಕೆಂಪು ಪಟ್ಟಿಗಿಂತಲೂ ಕೆಳಗಿದೆ. ಅಗತ್ಯ ಮತ್ತು ಜೀವರಕ್ಷಕ ಔಷಧಿಗಳ ಅಲಭ್ಯತೆಯಿಂದಾಗಿ ಆರೋಗ್ಯ ಕೇಂದ್ರಗಳು ಮತ್ತು ಸರ್ಕರಿ ಆಸ್ಪತ್ರೆಗಳಲ್ಲಿನ ಬಡರೋಗಿಗಳು ನರಳುವಂತಾಗಿದೆ.

ಇದರಲ್ಲಿ ಅವ್ಯವಹಾರಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿವೆ. ವಾರ್ಷಿಕ ಟೆಂಡರ್‍ಗಳ ಮೂಲಕ ಸಂಸ್ಥೆಯ ಔಷಧಿಗಳನ್ನು ಖರೀದಿಸಿ ವಿತರಿಸುತ್ತದೆ. ಆದರೆ ಕ್ಷುಲ್ಲಕ ಕಾರಣಗಳನ್ನು ನೀಡಿ ಟೆಂಡರ್‍ಗಳನ್ನು ಅಂತಿಮಗೊಳಿಸದೆ ಮರು ಟೆಂಡರ್‍ಗೆ ಅವಕಾಶ ಅಥವಾ ಟೆಂಡರ್ ರದ್ದಾಗುವಂತೆ ಮಾಡಲಾಗುತ್ತಿದೆ.ಇದರಲ್ಲಿ ಭಾರೀ ಅಕ್ರಮಗಳು ಡೆದಿದೆ ಎಂಬ ಆರೋಪಗಳಿವೆ. ಅಲ್ಲದೆ ಕಳೆದ 10 ವರ್ಷಗಳಿಂದ ಸಂಬಂಧಪಟ್ಟವರಿಗೆ ಹಣದ ಮರುಪಾವತಿ ಮಾಡಿಲ್ಲ ಹಾಗೂ ಕಳೆದ ಮೂರು ತಿಂಗಳಿನಿಂದ ಔಷಧಿ ತಯಾರಿಕಾ ಸಂಸ್ಥೆಗಳಿಗೆ ಹಣ ನೀಡಿಲ್ಲ. ಇವುಗಳ ಒಟ್ಟು ಮೌಲ್ಯವೇ 10 ಕೋಟಿ ರೂ.ಗಳು ಎನ್ನಲಾಗಿದೆ.
ಕಳೆದ ವರ್ಷ ಡಿಸೆಂಬರ್‍ನಲ್ಲಿ ಕರೆಯಲಾಗಿದ್ದ ಟೆಂಡರ್‍ಗೆ ಸಂಬಂಧಪಟ್ಟಂತೆ ಈವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. ಈ ವಿಳಂಬದಿಂದಾಗಿ ಮತ್ತು ಟೆಂಡರ್ ಅಂತಿಮಗೊಳ್ಳದ ಕಾರಣ ಆಸ್ಪತ್ರೆಯಲ್ಲಿ ಔಷಧಿಗಳ ದಾಸ್ತಾನು ಆತಂಕಕಾರಿ ಮಟ್ಟಕ್ಕೆ ಕುಸಿದಿದ್ದು , ರೋಗಿಗಳು ಸಾವು-ಬದುಕಿನೊಂದಿಗೆ ಹೋರಾಡುವಂಥ ಪರಿಸ್ಥಿತಿ ಎದುರಾಗಿದೆ ಈ ವಿಳಂಬಕ್ಕೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳೇ ಕಾರಣ ಎಂದು ಹೇಳಲಾಗಿದೆ.

ಆರೋಗ್ಯ ಕೇಂದ್ರಗಳು ಮತ್ತು ಬಡರೋಗಿಗಳ ಹಿತಾಸಕ್ತಿಯಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಂಡು ಸಕಾಲದಲ್ಲಿ ಅಗತ್ಯ ಮತ್ತು ಜೀವರಕ್ಷಕ ಔಷಧಿಗಳನ್ನು ಪುರೈಸಿ ಬಡ ರೋಗಿಗಳ ಜೀವರಕ್ಷಿಸಬೇಕೆಂಬ ಕೂಗು ಕೇಳಿಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ