ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಣೆ ಮಾಡದೆ ಮೂರ್ನಾಲ್ಕು ಸ್ಥಾನಗಳನ್ನು ಬಾಕಿ ಉಳಿಸಿಕೊಳ್ಳಲು ಮೈತ್ರಿ ಸರಕಾರ ನಿರ್ಧಾರ

 

ಬೆಂಗಳೂರು, ಮೇ 31-ಆಪರೇಷನ್ ಕಮಲದ ಭೀತಿಯಿಂದ ಸಂಪುಟ ವಿಸ್ತರಣೆಗೆ ವಿಳಂಬ ನೀತಿ ಅನುಸರಿಸುತ್ತಿರುವ ಮೈತ್ರಿ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಣೆ ಮಾಡದೆ ಮೂರ್ನಾಲ್ಕು ಸ್ಥಾನಗಳನ್ನು ಬಾಕಿ ಉಳಿಸಿಕೊಳ್ಳಲು ನಿರ್ಧರಿಸಿವೆ.
ಸಚಿವ ಸಂಪುಟದಲ್ಲಿ 34 ಸ್ಥಾನಗಳನ್ನು ಭರ್ತಿ ಮಾಡಬೇಕಿದ್ದು, ಜೆಡಿಎಸ್‍ನಿಂದ ಮುಖ್ಯಮಂತ್ರಿ ಕಾಂಗ್ರೆಸ್‍ನಿಂದ ಉಪಮುಖ್ಯಮಂತ್ರಿ ನೇಮಕ ಮಾಡಲಾಗಿದೆ. ಬಾಕಿ ಇರುವ 32 ಸ್ಥಾನಗಳ ಪೈಕಿ ಕಾಂಗ್ರೆಸ್‍ಗೆ 21, ಜೆಡಿಎಸ್ 11 ಸ್ಥಾನಗಳು ಲಭ್ಯವಾಗಲಿವೆ.

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ವಿದೇಶ ಪ್ರವಾಸಕ್ಕೆ ತೆರಳಿದ್ದು, ಇಂದು ರಾತ್ರಿ ದೆಹಲಿಗೆ ವಾಪಸಾಗಲಿದ್ದಾರೆ. ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಸಂಪುಟ ವಿಸ್ತರಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಉನ್ನತ ಮೂಲಗಳ ಪ್ರಕಾರ ಈಗಾಗಲೇ ಸಂಭವನೀಯ ಸಚಿವರ ಪಟ್ಟಿ ಸಿದ್ದಗೊಂಡಿದೆ. ಖಾತೆ ಹಂಚಿಕೆ ವಿಷಯದಲ್ಲಿ ಹಲವು ಸುತ್ತಿನ ಸಭೆಗಳು ನಡೆದಿದ್ದು, ಇನ್ನೂ ಗೊಂದಲಗಳು ಬಗೆಹರಿದಿಲ್ಲ.

ಹಣಕಾಸು, ಕಂದಾಯ, ಜಲಸಂಪನ್ಮೂಲ, ಇಂಧನ, ಗ್ರಾಮೀಣಾಭಿವೃದ್ಧಿ, ಗೃಹ ಖಾತೆ ವಿಷಯದಲ್ಲಿ ಎರಡೂ ಪಕ್ಷಗಳ ನಡುವೆ ಒಮ್ಮತ ಮೂಡಿಲ್ಲ. ಹೀಗಾಗಿ ನಾಳೆ ರಾಹುಲ್‍ಗಾಂಧಿ ಅವರ ಜತೆ ಚರ್ಚೆ ಮಾಡಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಖಾಲಿ ಇರುವ ಎಲ್ಲಾ ಸ್ಥಾನಗಳಿಗೂ ಏಕಕಾಲಕ್ಕೆ ಸಚಿವರನ್ನು ನೇಮಿಸದೆ ಕಾಂಗ್ರೆಸ್‍ನಲ್ಲಿ ಮೂರ್ನಾಲ್ಕು ಸ್ಥಾನಗಳನ್ನು, ಜೆಡಿಎಸ್ ಎರಡರಿಂದ ಮೂರು ಸ್ಥಾನಗಳನ್ನು ಖಾಲಿ ಬಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಂಸತ್ ಚುನಾವಣೆಯವರೆಗೂ ಈ ಸ್ಥಾನಗಳನ್ನು ಭರ್ತಿ ಮಾಡದೆ ಬಂಡಾಯಗಾರರನ್ನು ನಿಭಾಯಿಸುವ ಚರ್ಚೆಗಳು ನಡೆದಿವೆ. ಕಾಂಗ್ರೆಸ್- ಜೆಡಿಎಸ್ ಪಕ್ಷದ ಅತೃಪ್ತರನ್ನು ಸೆಳೆಯಲು ಬಿಜೆಪಿ ಆಪರೇಷನ್ ಕಮಲವನ್ನು ಚಾಲನೆಯಲ್ಲಿಟ್ಟಿದೆ.
ಸಚಿವ ಸಂಪುಟದಲ್ಲಿ ಪೂರ್ತಿ ಸ್ಥಾನಗಳನ್ನು ಭರ್ತಿ ಮಾಡಿದರೆ ಅತೃಪ್ತರು ಆಪರೇಷನ್ ಕಮಲಕ್ಕೆ ಬಲಿಯಾಗಿ ಬಿಜೆಪಿಯತ್ತ ಒಲಿಯುವುದರಿಂದ ಕೆಲವು ಸ್ಥಾನಗಳನ್ನು ಖಾಲಿ ಇಡಲು ನಿರ್ಧರಿಸಲಾಗಿದೆ.

ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮಾರು ಮೂರು ವರ್ಷಗಳ ಕಾಲ ಸಂಪುಟವನ್ನು ರಚಿಸದೆ ಕೆಲವು ಸ್ಥಾನಗಳನ್ನು ಖಾಲಿ ಉಳಿಸಿಕೊಂಡಿದ್ದರು. ಅದರಿಂದಾಗಿಯೇ ಬಹಳಷ್ಟು ಅತೃಪ್ತರು ಏಕಾಏಕಿ ಬಂಡಾಯ ಏಳಲಾಗದೆ ಒಳಗೊಳಗೆ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದರು.
ಮೈತ್ರಿ ಸರ್ಕಾರ ಅತ್ಯಂತ ಸೂಕ್ಷ್ಮ ಮತ್ತು ಕ್ಲಿಷ್ಟ ಪರಿಸ್ಥಿತಿಯಲ್ಲಿ ನಡೆಯುತ್ತಿದ್ದು, ಈ ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯ ಅವರು ಅನುಸರಿಸಿದ ತಂತ್ರಗಾರಿಕೆಯನ್ನೇ ಮುಂದುವರೆಸಲು ನಿರ್ಧರಿಸಲಾಗಿದೆ.
ಮತ್ತೊಂದು ಮೂಲಗಳ ಪ್ರಕಾರ ರಾಹುಲ್‍ಗಾಂಧಿ ಅವರೊಂದಿಗೆ ದೂರವಾಣಿಯಲ್ಲೇ ಚರ್ಚೆ ನಡೆಸಿ ಸಚಿವರನ್ನು ಆಯ್ಕೆ ಮಾಡಲಿದ್ದು, ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ