ಬೆಂಗಳೂರು, ಮೇ 31- ಮಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ 23ಕೋಟಿ ನಷ್ಟವಾಗಿದ್ದು, ಎರಡ್ಮೂರು ಜೀವ ಹಾನಿಯಾಗಿವೆ. ಜಿಲ್ಲಾಡಳಿತ ಹಗಲು-ರಾತ್ರಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ನಡೆಸುತ್ತಿದೆ. ಸರ್ಕಾರ ಪರಿಹಾರ ಕಾರ್ಯಕ್ಕೆ ಅಗತ್ಯವಾದ ಎಲ್ಲಾ ಹಣಕಾಸು ಸೌಲಭ್ಯವನ್ನು ಒದಗಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್‍ನ ನಾಲ್ಕು ಮಂದಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಧಾರಾಕಾರ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಮಳೆ ಹಾನಿಯಿಂದ ಜೀವ ಕಳೆದುಕೊಂಡ ಕುಟುಂಬದವರಿಗೆ ಸರ್ಕಾರ ಪರಿಹಾರ ಪಾವತಿಸಿದೆ ಎಂದರು.
ಈಗಾಗಲೇ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ಅಗತ್ಯಬಿದ್ದರೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಲು ಸರ್ಕಾರ ಸಿದ್ದವಿದೆ ಎಂದರು.
ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ರೋಷನ್‍ಬೇಗ್, ರಾಜ್ಯಸಭಾ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಹಾಜರಿದ್ದರು.
ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಗಳಾದ ಸಿ.ಎಂ.ಇಬ್ರಾಹಿಂ, ಕೆ.ಗೋವಿಂದರಾಜು, ಹರೀಶ್‍ಕುಮಾರ್, ಅರವಿಂದ ನಾಮಪತ್ರ ಸಲ್ಲಿಸಿದರು.