ರಾಯಭಾಗ, ಮೇ 30- ಜೆಲ್ಲಿ ಕ್ರಷರ್ ಬಂದ್ ಮಾಡುವಂತೆ ಒತ್ತಾಯಿಸಿ ನಡೆದ ಕಲ್ಲು ತೂರಾಟದಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ ಎಂಬ ಹಿನ್ನೆಲೆಯಲ್ಲಿ ನಂದಿಕುರುಳಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಿನ್ನೆ ತಡರಾತ್ರಿ ರಾಯಭಾಗ ತಾಲ್ಲೂಕಿನ ನಂದಿಕುರುಳಿ ಗ್ರಾಮದ ಹೊರವಲಯದಲ್ಲಿ ಕ್ರಷನ್ ಮಿಷನ್ನವರು ಕಲ್ಲು ತೂರಾಟ ನಡೆಸಿ ಮಹಿಳೆಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ರಾಯಭಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಎಸ್ಪಿ ಸುಧೀರ್ಕುಮಾರ್ರೆಡ್ಡಿ, ತಡರಾತ್ರಿ ರೆಹಮದ್ ಬಿ. ಮತ್ತು ಮುಲ್ತಾನಿ ಸೇರಿದಂತೆ 10ರಿಂದ 15 ಮಂದಿ ಕಟ್ಟಿಗೆ ಹಿಡಿದು ಕ್ರಷರ್ ಮಿಷನ್ ಬಳಿ ಬಂದು ಮಿಷನ್ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ರೆಹಮದ್ ಎಂಬ ಮಹಿಳೆ ಮೆಟ್ಟಿನಿಂದ ಜಾರಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಆದರೆ, ಕಲ್ಲು ತೂರಾಟದ ವೇಳೆ ಕೊಲೆಯಾಗಿಲ್ಲ.
ಈ ಗಲಾಟೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು, ಲಾಲ್ಸಾಬ್ ಮುಲ್ತಾನಿ ಮತ್ತು ಪೀರ್ಸಾಬ್ ಮುಲ್ತಾನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಐದಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು, 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ.
ಗ್ರಾಮದಲ್ಲಿ ಘಟನೆಯಿಂದಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳಕ್ಕೆ ಎಸ್ಪಿ ಸುಧೀರ್ಕುಮಾರ್ ರೆಡ್ಡಿ ಭೇಟಿ ನೀಡಿ ಪರಿಶೀಲಿಸುತ್ತಿದ್ದು, ಸಿಸಿ ಟಿವಿ ಪುಟೇಜ್ಗಳನ್ನು ಪರಿಶೀಲಿಸಲಾಗುತ್ತಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ರೆಹಮದ್ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಬಳಿಯೂ ಬಂದೋಬಸ್ತ್ ಮಾಡಲಾಗಿದೆ.