ವಿಧಾನ ಪರಿಷತ್‍ನ 11 ಸ್ಥಾನಗಳಿಗೆ ಜೂ 12ರಂದು ನಡೆಯುವ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು. ಮೇ. 30- ವಿಧಾನ ಪರಿಷತ್‍ನ 11 ಸ್ಥಾನಗಳಿಗೆ ಜೂ 12ರಂದು ನಡೆಯುವ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜೆಡಿಎಸ್ ತಡ ರಾತ್ರಿ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಬಿಜೆಪಿ 5, ಕಾಂಗ್ರೆಸ್ 4, ಜೆಡಿಎಸ್ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯತೆ ಇದೆ.
ಈಗಾಗಲೇ ಕಾಂಗ್ರೆಸ್ 4, ಬಿಜೆಪಿ 5 ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿದ್ದು, ಜೆಡಿಎಸ್ ಇಬ್ಬರನ್ನು ಮಾತ್ರ ಕಣಕ್ಕಿಳಿಸಿದರೆ ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಬಿಜೆಪಿ ಹಾಲಿ ಸದಸ್ಯ ರಘುನಾಥ್ ಮಲ್ಕಾಪುರೆ, ಉದ್ಯಮಿ ಕೆ.ಪಿ. ನಂಜುಂಡಿ, ಬಿಜೆಪಿ ವಕ್ತಾರರಾದ ತೇಜಸ್ವಿನಿಗೌಡ, ಶಿವಮೊಗ್ಗ ಬಿಜೆಪಿ ಮುಖಂಡ ರುದ್ರೇಗೌಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರನ್ನು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ.
ಇನ್ನೂ ಕಾಂಗ್ರೆಸ್ ಹಾಲಿ ಸದಸ್ಯರಾದ ಸಿ.ಎಂ.ಇಬ್ರಾಹಿಂ, ಕೆ.ಗೋವಿಂದರಾಜ ಅವರಿಗೆ ಪುನಹಃ ಅವಕಾಶ ನೀಡಿದ್ದು, ಎರಡು ಸ್ಥಾನಗಳಿಗೆ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ. ಕೆಪಿಸಿಸಿ ಕಾರ್ಯದರ್ಶಿಯಾಗಿರುವ ಅರವಿಂದ ಕುಮಾರ್ ಎಸ್.ಅರಳಿ, ಮಂಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್‍ನ ಮೊಟಮ್ಮ ಮೂಡಿಗೆರೆ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯ ಟಿಕೆಟ್ ಪಡೆದು ಸ್ಪರ್ಧಿಸಿ ಸೋಲು ಕಂಡಿದ್ದರು. ಅಂತಿಮವಾಗಿ ಮತ್ತೊಮ್ಮೆ ವಿಧಾನ ಪರಿಷತ್‍ಗೆ ನೇಮಕವಾಗಲು ಪ್ರಯತ್ನ ನಡೆಸಿದ್ದರು. ಆದರೆ ಹೈಕಮಾಂಡ್ ಅದಕ್ಕೆ ಮನ್ನಣೆ ನೀಡಿಲ್ಲ. ಇನ್ನೂ ಬೈರತಿ ಸುರೇಶ್ ಹೆಬ್ಬಾಳ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ.
ಅರವಿಂದ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿದ್ದು, ಹರೀಶ್ ಕುಮಾರ ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಆಪ್ತರಾದ ರಾಮಚಂದ್ರಪ್ಪ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದರು. ಆದರೆ ಅದು ಸಫಲವಾಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ