ಬೆಂಗಳೂರು, ಮೇ 30-ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ರೈತ ಸಂಘಟನೆಗಳ ಮುಖಂಡರು, ರೈತರು ಸರ್ಕಾರವನ್ನು ಆಗ್ರಹಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ರೈತರು ಹಾಗೂ ಬಹುತೇಕ ರೈತ ಮುಖಂಡರು ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದರು.
ಕಬ್ಬು ಬೆಳೆಗಾರರ ಸಂಘದ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರೈತರು ತಮ್ಮ ಚಿನ್ನಾಭರಣವನ್ನು ಗಿರವಿ ಇಟ್ಟು ಬೆಳೆ ಸಾಲ ಪಡೆದಿದ್ದಾರೆ. ಅದನ್ನೂ ಕೂಡ ಸರ್ಕಾರ ಪರಿಗಣಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಬೈಯಾರೆಡ್ಡಿ ಮಾತನಾಡಿ, ಸಾಲ ಮನ್ನಾದ ಮುಖ್ಯ ಹೊರೆಯನ್ನು ಕೇಂದ್ರ ಸರ್ಕಾರವೂ ಹೊರ ಬೇಕು. ರಾಜ್ಯದ ಪರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಿಯೋಗ ಕೊಂಡೊಯ್ಯಬೇಕು. ರಾಜ್ಯದಲ್ಲಿ ಜನಾಂದೋಲ ಮಾಡಬೇಕು ಎಂದು ಸಲಹೆ ನೀಡಿದರು.
ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಸಂಸತ್‍ನಲ್ಲಿ ಎರಡು ವಿಧೇಯಕಗಳು ಮಂಡನೆಯಾಗುತ್ತಿವೆ ಎಂದರು.
ಸುಮಾರು 55 ಸಾವಿರ ಕೋಟಿ ರೂ.ಗಳಷ್ಟು ರೈತರು ಸಾಲ ಮಾಡಿದ್ದಾರೆ. ಶೇ.64ರಷ್ಟು ರೈತರು ಬ್ಯಾಂಕ್‍ನಿಂದ ಹೊರಗೆ ಸಾಲ ಪಡೆಯುತ್ತಿದ್ದು, ಆ ಸಾಲದ ಬಗ್ಗೆಯೂ ಆಯೋಗವೊಂದನ್ನು ರಚಿಸಬೇಕೆಂದು ಸಲಹೆ ಮಾಡಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕಾಗುತ್ತದೆ ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರೈತರ ಸಾಲ ಮನ್ನಾ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿ ಹೊಣೆಗಾರಿಕೆ ಹೊರಬೇಕಾಗುತ್ತದೆ ಎಂದರು.
ರೈತ ಮುಖಂಡ ನಾಗರಾಜ್ ಮಾತನಾಡಿ, ಸಣ್ಣ ಮತ್ತು ದೊಡ್ಡ ರೈತರೆಂಬ ವರ್ಗೀಕರಣ ಮಾಡದೆ ಸಾಲ ಮನ್ನಾ ಮಾಡಬೇಕು. ಮೂರು ಲಕ್ಷ ರೂ.ವರೆಗೂ ಸಾಲ ಮನ್ನಾ ಮಾಡಬೇಕು. ರೈತರ ಕೃಷಿ ಉತ್ಟನ್ನಗಳಿಗೆ ಯೋಗ್ಯ ಬೆಲೆ ದೊರೆಯಲು ಸಾಕಷ್ಟು ಪರಿಹಾರ ಕಲ್ಪಿಸಬೇಕೆಂದು ಸಲಹೆ ನೀಡಿದರು.
ಮತ್ತೊಬ್ಬ ರೈತ ಮುಖಂಡ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ಆಡಳಿತದಲ್ಲಿ ಕೆಲವು ಮಾರ್ಪಾಡುಗಳನ್ನು ತಂದು ಏಕಕಾಲಕ್ಕೆ 55 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಬಹುದು. ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿತ ತಡೆಯಲು ಸರ್ಕಾರ ನೀತಿ ರೂಪಿಸಬೇಕೆಂದು ಸಲಹೆ ಮಾಡಿದರು.
ಪ್ರದೇಶ ಕಾಂಗ್ರೆಸ್ ಸಮಿತಿಯ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮಿಗಾ ಮಾತನಾಡಿ, ರಾಜ್ಯದ 30 ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಂಡ 697 ಮನೆಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಲಾಗಿದ್ದು, 1.14 ಲಕ್ಷ ಕೋಟಿಯಷ್ಟು ಸಾಲವಿದೆ. ಕೇಂದ್ರ ಸರ್ಕಾರ ಶೇ.33ರಷ್ಟು, ರಾಜ್ಯ ಸರ್ಕಾರ ಶೇ.33ರಷ್ಟು ಸಾಲದ ಪ್ರಮಾಣ ಭರಿಸುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟರು.
ಹೀಗೇ ಸಭೆಯಲ್ಲಿ ಭಾಗವಹಿಸಿದ ರೈತ ಮುಖಂಡರು, ಪ್ರಗತಿಪರ ರೈತರು ಸಾಲ ಮನ್ನಾ ಕುರಿತಂತೆ ತಮ್ಮದೇ ಆದ ಸಲಹೆ ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.