ಬೆಂಗಳೂರು, ಮೇ 30- ಕಳೆದ ಐದು ತಿಂಗಳಿನಿಂದ ವೇತನ ಇಲ್ಲದೆ ತೊಂದರೆ ಅನುಭವಿಸುತ್ತಿರುವ ಪೌರಕಾರ್ಮಿಕರಿಗೆ ಇನ್ನೊಂದು ವಾರದೊಳಗೆ ವೇತನ ಪಾವತಿಸಲು ಕ್ರಮ ತೆಗೆದುಕೊಳ್ಳುವಂತೆ ಪಾಲಿಕೆ ಸಭೆಯಲ್ಲಿಂದು ಮೇಯರ್ ಸಂಪತ್‍ರಾಜ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಅವರು ಐದು ತಿಂಗಳಿನಿಂದ ವೇತನ ಪಾವತಿಯಾಗದೆ ಪೌರಕಾರ್ಮಿಕರು ಪರದಾಡುತ್ತಿದ್ದಾರೆ ಹಾಗೂ ಮಳೆ ಅನಾಹುತ ತಡೆಗಟ್ಟಲು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದಾಗ ಮೇಯರ್ ಪ್ರತಿಕ್ರಿಯಿಸಿ, ಇನ್ನೊಂದು ವಾರದೊಳಗೆ ಪೌರಕಾರ್ಮಿಕರಿಗೆ ವೇತನ ಪಾವತಿ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆ ಅನಾಹುತದ ಬಗ್ಗೆ ಮಾತನಾಡಿದ ಪದ್ಮನಾಭರೆಡ್ಡಿ, ಮಳೆ ಬಂದಾಗಲೆಲ್ಲಾ ಮರಗಳು ಧರೆಗುರುಳುತ್ತಿವೆ. ಈಗಾಗಲೇ ಬಿದ್ದಿರುವ ಮರಗಳನ್ನು ಇನ್ನೂ ಸರಿಯಾಗಿ ತೆರವುಗೊಳಿಸಿಲ್ಲ. ಬೇಜಾವಾಬ್ದಾರಿ ಕೆಲಸ ಮಾಡುವ ಅಧಿಕಾರಿಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಲಾದರೂ ಎಚ್ಚೆತ್ತುಕೊಳ್ಳಿ. ಮಳೆ ಅನಾಹುತ ತಪ್ಪಿಸಲು ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.
ನಂತರ ಮೇಯರ್ ಸಂಪತ್‍ರಾಜ್ ಮಾತನಾಡಿ, ಅಂಗಡಿಗಳು, ಹೋಟೆಲ್‍ಗಳ ಮುಂದೆ ಮರಗಳಿಗೆ ಲೈಟ್ ಬಿಡಲಾಗಿದೆ. ಮೊನ್ನೆ ಮಳೆ ಬಂದಾಗ ಮಗುವಿಗೆ ಶಾಕ್ ಹೊಡೆದಿದೆ. ಒಂದು ವಾರದಲ್ಲಿ ಮರಗಳಿಗೆ ಹಾಕಿರುವ ಸೀರಿಯಲ್ ಲೈಟ್ ಸೆಟ್‍ಗಳನ್ನು ತೆಗೆಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಎಇ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.