ಬೆಂಗಳೂರು, ಮೇ 30-ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯಲಿರುವ 11 ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕಡೆಯ ದಿನವಾಗಿದ್ದು, 3 ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ.
ಪ್ರತಿಪಕ್ಷ ಬಿಜೆಪಿ, ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹನುಮನ ಬಾಲದಂತೆ ಬೆಳೆಯುತ್ತಿದೆ. 3 ಪಕ್ಷಗಳಿಗೂ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಗ್ಗಂಟಾಗಿ ಪರಿಣಮಿಸಿದೆ.
ನಾಮಪತ್ರ ಸಲ್ಲಿಸಲು ನಾಳೆ ಕಡೆ ದಿನವಾಗಿರುವುದರಿಂದ ಯಾವುದೇ ಕ್ಷಣ ಅಭ್ಯರ್ಥಿಗಳ ಹೆಸರು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈಗಿನ ವಿಧಾನಸಭೆಯಲ್ಲಿ ಪಕ್ಛ್ಷಗಳು ಹೊಂದಿರುವ ಬಲಾಬಲಗಳ ಪ್ರಕಾರ ಬಿಜೆಪಿಯಿಂದ 5, ಕಾಂಗ್ರೆಸ್ನಿಂದ 4, ಜೆಡಿಎಸ್ನಿಂದ ಇಬ್ಬರು ಸದಸ್ಯರನ್ನು ವಿಧಾನಸಭೆಯಿಂದ ಮೇಲ್ಮನೆಗೆ ಆಯ್ಕೆ ಮಾಡಬಹುದು.
ಬಿಜೆಪಿಯು ಡಿ.ಎಸ್.ವೀರಯ್ಯ, ಸೋಮಣ್ಣ ಬೇವಿನಮರದ್, ಬಿ.ಜಿ.ಪುಟ್ಟಸ್ವಾಮಿ, ಭಾನುಪ್ರಕಾಶ್ ಸೇರಿದಂತೆ ಐವರು ಸದಸ್ಯರು ನಿವೃತ್ತಿಯಾಗಲಿದ್ದಾರೆ.
ಕಾಂಗ್ರೆಸ್ನಿಂದ ಗೋವಿಂದರಾಜು, ಸಿ.ಎಂ.ಇಬ್ರಾಹಿಂ ಮತ್ತು ಜೆಡಿಎಸ್ನ ಇಬ್ಬರು ಸದಸ್ಯರ ಅವಧಿ ಮುಗಿಯಲಿದೆ.
ನಿನ್ನೆ ಬಿಜೆಪಿ ಕೋರ್ಕಮಿಟಿ ಸಭೆಯಲ್ಲಿ 5 ಸ್ಥಾನಗಳಿಗೆ 128 ಆಕಾಂಕ್ಷಿಗಳ ಪಟ್ಟಿಯನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಟ್ಟಿದೆ.
ಡಿ.ಎಸ್.ವೀರಯ್ಯ, ಬಿ.ಜೆ.ಪುಟ್ಟಸ್ವಾಮಿ ಮತ್ತೊಂದು ಅವಧಿಗೆ ಮುಂದುವರೆಯಲು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಕೆಲವು ಮುಖಂಡರ ಬಳಿ ಲಾಬಿ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ, ಉದ್ಯಮಿ ಕೆ.ಪಿ.ನಂಜುಂಡಿ, ಪಕ್ಷದ ವಕ್ತಾರ ಅಶ್ವತ್ಥನಾರಾಯಣ, ಪ್ರಧಾನಕಾರ್ಯದರ್ಶಿ ರವಿಕುಮಾರ್, ಮಾಜಿ ಸದಸ್ಯ ಅಶ್ವತ್ಥನಾರಾಯಣ್, ತೇಜಸ್ವಿನಿ ರಮೇಶ್ ಸೇರಿದಂತೆ ಮತ್ತಿತರರು ಆಕಾಂಕ್ಷಿಗಳಾಗಿದ್ದಾರೆ.
ಜೆಡಿಎಸ್ನಿಂದ ಉದ್ಯಮಿ ಬಿ.ಎಂ.ಫಾರೂಕ್, ಮಾಜಿ ಶಾಸಕರಾದ ಕೋನರೆಡ್ಡಿ, ಮಧುಬಂಗಾರಪ್ಪ, ಮುಖಂಡರಾದ ನಾರಾಯಣರಾವ್, ಆರ್.ಪ್ರಕಾಶ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಕಾಂಗ್ರೆಸ್ನಲ್ಲಿ ಕೆ.ಗೋವಿಂದರಾಜು, ಸಿ.ಎಂ.ಇಬ್ರಾಹಿಂ, ರಾಣಿ ಸತೀಶ್, ಮೋಟಮ್ಮ ಸೇರಿದಂತೆ ಒಂದು ಡಜನ್ ಅಧಿಕ ಆಕ್ಷಾಂಕಿಗಳು ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಸಂಜೆ ವೇಳಗೆ ಮೂರು ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡುವ ಸಂಭವವಿದೆ.