ಬೆಂಗಳೂರು, ಮೇ 30- ರಾಜ್ಯದಲ್ಲಿ ಹೊಸ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಹುದ್ದೆ ಗಿಟ್ಟಿಸಲು ಭಾರೀ ಲಾಬಿ ಆರಂಭವಾಗಿದೆ.
ಹಾಲಿ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಅವರ ಅಧಿಕಾರಾವಧಿ ಜೂನ್ 30ಕ್ಕೆ ಅಂತ್ಯಗೊಳ್ಳಲಿದೆ. ಸರ್ಕಾರ ಮತ್ತೊಮ್ಮೆ ಅವರನ್ನು ಮುಂದುರೆಸುವ ಸಾಧ್ಯತೆಗಳಿಲ್ಲ. ಹಾಗಾಗಿ ತೆರವಾಗಲಿರುವ ಈ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿಗಳು ಈಗಾಗಲೇ ತೆರೆಮರೆಯಲ್ಲಿ ತಮ್ಮ ತಮ್ಮ ಗಾಡ್ ಫಾದರ್ಗಳ ಮೂಲಕ ಒತ್ತಡ ಹಾಕುತ್ತಿದ್ದಾರೆ.
ಮುಖ್ಯಕಾರ್ಯದರ್ಶಿ ಹುದ್ದೆಗೆ ಪ್ರಮುಖವಾಗಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಲತಾಕೃಷ್ಣರಾಜು ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬಂದಿವೆ.
ಮುಖ್ಯಮಂತ್ರಿ ನಂತರ ಸರ್ಕಾರದ ಮಟ್ಟದಲ್ಲಿ ಮುಖ್ಯಕಾರ್ಯದರ್ಶಿ ಹುದ್ದೆ ಅತ್ಯಂತ ಮಹತ್ವದ್ದಾಗಿರುತ್ತದೆ. ಹೀಗಾಗಿ ಇದನ್ನು ಸಾಕಷ್ಟು ಅನುಭವಿಗಳಿಗೆ ಅಳೆದು ತೂಗಿ ನೀಡುವುದು ವಾಡಿಕೆ.
ಒಂದೊಂದು ಬಾರಿ ಮುಖ್ಯಮಂತ್ರಿಗಳ ಕೃಪೆ ಯಾರ ಮೇಲೆರುತ್ತದೆಯೋ ಅಂಥವರು ಕೂಡ ಇದನ್ನು ನಿಭಾಯಿಸಿರುವ ನಿದರ್ಶನಗಳಿವೆ. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಇರುವುದರಿಂದ ಆಯ್ಕೆ ಮಾಡುವಾಗ ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೇಲಿದೆ.
ಕಾಂಗ್ರೆಸ್ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಆಯ್ಕೆ ಮಾಡಬೇಕಾಗಿದೆ. ಈಗಾಗಲೇ ಕೆಲ ಐಎಎಸ್ ಅಧಿಕಾರಿಗಳು ತಮ್ಮನ್ನೇ ಪರಿಗಣಿಸಬೇಕೆಂದು ತೆರೆಮರೆಯಲ್ಲಿ ಲಾಬಿ ಆರಂಭಿಸಿದ್ದಾರೆ.
ಯಾರಿಗೆ ಒಲಿಯಲಿದೆ ಅದೃಷ್ಟ…?:
ರತ್ನಪ್ರಭಾ ಅವರಿಂದ ತೆರವಾಗಲಿರುವ ಮುಖ್ಯಕಾರ್ಯದರ್ಶಿ ಹುದ್ದೆಗೆ ಸದ್ಯಕ್ಕೆ ಮೂವರು ಐಎಎಸ್ ಅಧಿಕಾರಿಗಳ ಹೆಸರು ಕೇಳಿ ಬರುತ್ತಿದೆ.
ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿರುವ ಟಿ.ಎಂ.ವಿಜಯಭಾಸ್ಕರ್ ಇತರರಿಗಿಂತಲೂ ಮುಂಚೂಣಿಯಲ್ಲಿದ್ದಾರೆ. ಉಳಿದಂತೆ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಕಾರ್ಯದರ್ಶಿ ಲತಾ ಕೃಷ್ಣರಾಜು ಹಾಗೂ ಕೇಂದ್ರ ಕೃಷಿ ಇಲಾಖೆ ಕಾರ್ಯದರ್ಶಿ ಪಟ್ನಾಯಕ್ ಎಸ್.ಕೆ. ಕೂಡ ಆಕಾಂಕ್ಷಿಯಾಗಿದ್ದಾರೆ.
ಮೇ 31, 2019ರಂದು ಲತಾಕೃಷ್ಣರಾಜು ಸೇವೆಯಿಂದ ನಿವೃತ್ತರಾದರೆ, ಪಟ್ನಾಯಕ್ ಎಸ್.ಕೆ. ಅವರು ಸೆಪ್ಟೆಂಬರ್ 30ರಂದು ನಿವೃತ್ತಿ ಹೊಂದಲಿದ್ದಾರೆ. ಉಳಿದಂತೆ ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಕೃಷ್ಣ ಕೆ.ಪಿ., ಡಿ.ವಿ.ಪ್ರಸಾದ್ ಹೆಸರುಗಳು ಕೇಳಿ ಬಂದಿವೆಯಾದರೂ ಸೇವಾ ಹಿರಿತನದ ಮೇಲೆ ಪರಿಗಣಿಸುವ ಸಾಧ್ಯತೆ ಇಲ್ಲ.
ಸೇವಾ ಹಿರಿತನವನ್ನೇ ಪರಿಗಣಿಸುವುದಾದರೆ 1983ರ ಐಎಎಸ್ ಅಧಿಕಾರಿಗಳಾಗಿರುವ ಲತಾ ಕೃಷ್ಣರಾಜು, ಇಲ್ಲವೇ ಪಟ್ನಾಯಕ್ ಅವರಿಗೆ ಸಿಗಬೇಕು. ಆದರೆ, ಇವರ ಅಧಿಕಾರಾವಧಿ ಕೆಲವೇ ದಿನಗಳು ಇರುವುದರಿಂದ ಇವರನ್ನು ಸರ್ಕಾರ ಪರಿಗಣಿಸುವ ಸಾಧ್ಯತೆಗಳು ತೀರಾ ಕಡಿಮೆ.
ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿರುವ ವಿಜಯ್ಭಾಸ್ಕರ್ ಅಧಿಕಾರಾವಧಿ 2020 ಡಿ.31ಕ್ಕೆ ಅಂತ್ಯಗೊಳ್ಳಲಿದೆ. ಅಲ್ಲದೆ, ಈ ಹಿಂದೆ ಅವರು ಅನೇಕ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಫ್ರೆಂಚ್ ಸೇರಿದಂತೆ ವಿವಿಧ ಭಾಷೆಗಳ ಮೇಲೆ ಹಿಡಿತ ಹೊಂದಿರುವ ಭಾಸ್ಕರ್ ಅವರ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ ಒಲವು ಇದೆ ಎಂದು ತಿಳಿದು ಬಂದಿದೆ.
ಕೇಂದ್ರ ಸರ್ಕಾರದಲ್ಲೂ ಸಾಕಷ್ಟು ಪ್ರಭಾವ ಇಟ್ಟುಕೊಂಡಿರುವ ಭಾಸ್ಕರ್, ಎಲ್ಲೇ ಇದ್ದರೂ ಆ ಹುದ್ದೆಗೆ ನ್ಯಾಯ ಒದಗಿಸಿಕೊಡುವ ಕೆಲವೇ ಕೆಲವು ಪ್ರಮುಖ ಅಧಿಕಾರಿಗಳಲ್ಲೊಬ್ಬರು. ಹೀಗಾಗಿ ಸರ್ಕಾರ ಇವರನ್ನೇ ಪರಿಗಣಿಸುವ ಸಾಧ್ಯತೆಗಳಿವೆ.