ಬೆಂಗಳೂರು, ಮೇ 30-ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಬಿಡುವುದಿಲ್ಲ. ನಮಗೂ ರಾಜಕೀಯ ಮಾಡಲು ಗೊತ್ತು. ಎರಡೂ ಪಕ್ಷಗಳ ಶಾಸಕರು ಒಟ್ಟಾಗಿ ಕೆಲಸ ಮಾಡುತ್ತೇವೆ. ರೈತನನ್ನು ಕಾಲನ ಸುಳಿಗೆ ಸಿಲುಕದಂತೆ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಅಭಯ ನೀಡಿದರು.
ವಿಧಾನಸೌಧದಲ್ಲಿಂದು ಕರೆದಿದ್ದ ರೈತ ಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆಯಲ್ಲಿ ಒಮ್ಮಿಂದೊಮ್ಮೆ ರೈತರು ಮಾತನಾಡಲು ಮುಂದಾದಾಗ ಉಂಟಾದ ಗದ್ದಲ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿಗಳು ರೈತ ನಾಯಕರಿಗೆ ಭರವಸೆ ನೀಡಿದರು.
ಕಬ್ಬು, ದಾಳಿಂಬೆ ಸೇರಿದಂತೆ ಎಲ್ಲಾ ಬೆಳೆಗಾರರ ಸಮಸ್ಯೆಗಳನ್ನು ಅರಿತಿದ್ದೇವೆ. ಹಿಂದಿನ ಸರ್ಕಾರ ಬಜೆಟ್ ಮಂಡಿಸಿದೆ. ನಾವೂ ಸಹ ಬಜೆಟ್ ಮಂಡಿಸಬೇಕಿದೆ. ಸಾಲ ಮನ್ನಾ ಮಾಡುವುದು ಸುಲಭವಲ್ಲ. 30 ಜಿಲ್ಲೆಗಳಿಂದ ಬಂದಿದ್ದೀರಿ. ಹಲವಾರು ಸಮಸ್ಯೆಗಳಿವೆ. ಯಾವ ಕಾಲಕ್ಕೆ ಯಾವ ಬೆಳೆ ಬೆಳೆಯಬೇಕು ಎಂಬುದರಿಂದ ಹಿಡಿದು ಯಾವುದೇ ಬೆಳೆಗಾರರು ಬೀದಿಗೆ ಬರದಂತೆ ಕಾರ್ಯಕ್ರಮ ನೀಡುವುದೇ ನಮ್ಮ ಉದ್ದೇಶ ಎಂದರು.
ಕಾಂಗ್ರೆಸ್‍ನ ಶಾಸಕರ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಬೇಕಿದೆ. ಪರಿಸ್ಥಿತಿ ಅರಿಯಿರಿ. ಅಧಿಕಾರ ನಡೆಸಲು ನಾವು ಬಂದಿದ್ದೇವೆ. ಚುನಾವಣೆಯಲ್ಲಿ ಯಾರಿಗಾದರೂ ನೀವು ಮತ ನೀಡಿ. ಇದು ರೈತ ಪರವಾದ ಸರ್ಕಾರ. ನಿಮಗೊಂದು ಸುವರ್ಣಾವಕಾಶ ದೊರೆತಿದೆ ಅದನ್ನು ಬಳಸಿಕೊಳ್ಳಿ ಎಂದು ಕರೆ ನೀಡಿದರು.