ರೈತರ ಸಾಲ ಮನ್ನಾ ವಿಚಾರವಾಗಿ ಕೇಂದ್ರ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ; ನಿಯೋಗ ಕೊಂಡೊಯ್ಯುವುದರಿಂದ ಪ್ರಯೋಜನವಾಗಲ್ಲ: ಸಿಎಂ

 

ಬೆಂಗಳೂರು, ಮೇ 30- ರೈತರ ಸಾಲ ಮನ್ನಾ ವಿಚಾರದಲ್ಲಿ ಕೇಂದ್ರ ಸರ್ಕಾರದ ಬಳಿಗೆ ನಿಯೋಗ ಕೊಂಡೊಯ್ಯುವುದರಿಂದ ಯಾವುದೇ ಉಪಯೋಗವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿಂದು ನಡೆದ ರೈತ ಸಂಘಟನೆಗಳ ಮುಖಂಡರು ಹಾಗೂ ಪ್ರಗತಿಪರ ರೈತರೊಂದಿಗೆ ಮಾತನಾಡಿದ ಅವರು, ರೈತರ ಸಾಲ ಮನ್ನಾ ವಿಚಾರವಾಗಿ ಕೇಂದ್ರ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ನಿಯೋಗ ಕೊಂಡೊಯ್ಯುವುದರಿಂದ ಪ್ರಯೋಜನವಾಗುವುದಿಲ್ಲ ಎಂದು ರೈತರು ಮಾಡಿದ ಮನವಿಗೆ ಪ್ರತಿಕ್ರಿಯಿಸಿದರು.

ಸರ್ಕಾರ ರೈತರ ಹಿತಾಸಕ್ತಿಕಾಪಾಡಲು ಬದ್ಧವಾಗಿದ್ದು, ಪಲಾಯನ ಮಾಡುವುದಿಲ್ಲ. ಯಾವುದೇ ನಾಯಕರ ಹಾಗೂ ಸರ್ಕಾರದ ಬಗ್ಗೆ ಟೀಕೆ ಮಾಡಲು ಸಭೆ ಕರೆದಿಲ್ಲ. ರೈತರು ತಮ್ಮ ಸಮಸ್ಯೆಗಳ ಈಡೇರಿಕೆಗಾಗಿ ಬೀದಿಗಿಳಿದು ಹೋರಾಟ ಮಾಡಲು ಅವಕಾಶ ನೀಡುವುದಿಲ್ಲ. ಸರ್ಕಾರದ ಹಣ ಸೋರಿಕೆಯಾಗುವುದನ್ನು ತಡೆದು ಆರ್ಥಿಕ ಪರಿಸ್ಥಿತಿ ಸದೃಢಗೊಳಿಸಲಾಗುವುದು ಎಂದರು.

ಜನರ ಮೇಲೆ ಸಾಲದ ಹೊರೆ ಹೊರಿಸುವುದಿಲ್ಲ ಎಂದ ಅವರು, ಬಾಗಲಕೋಟೆ ಜಿಲ್ಲೆಗೆ ಹೆಲಿಕಾಪ್ಟರ್‍ನಲ್ಲಿ ಪ್ರವಾಸ ಕೈಗೊಂಡಿದ್ದ ಗಣ್ಯರೊಬ್ಬರ ಪ್ರಯಾಣದ ವೆಚ್ಚ 13 ಲಕ್ಷ ರೂ. ಮೊತ್ತದ ಕಡತ ತಮ್ಮ ಬಳಿ ಬಂದಿದೆ. ತಾವು ದೆಹಲಿಗೆ ವಿಮಾನ ಪ್ರಯಾಣ ಬೆಳೆಸಿದ್ದರಿಂದ 75 ಸಾವಿರ ರೂ. ಆಗಿದೆ. ಆದರೆ, ವಿಶೇಷ ವಿಮಾನದಲ್ಲಿ ಹೋಗಿದ್ದರೆ ಲಕ್ಷಾಂತರ ರೂ. ಆಗುತ್ತಿತ್ತು ಎಂದು ಅವರು ಸಭೆಯ ಗಮನ ಸೆಳೆದರು.

ಗರಂ ಆದ ರೈತರು ಅಭಿಪ್ರಾಯ ಹೇಳಲು ತಾಮುಂದು, ನಾಮುಂದು ಎಂದು ಗದ್ದಲ ಉಂಟಾದ್ದರಿಂದ ಮುಖ್ಯಮಂತ್ರಿ ಮಧ್ಯ ಪ್ರವೇಶ ಮಾಡಬೇಕಾಯಿತು.
ಒಂದು ಹಂತದಲ್ಲಿ ಗದ್ದಲವನ್ನೇ ಮಾಡುತ್ತಿದ್ದರೆ ಬೇರೆ ಕಡೆ ಮಾಡಿಕೊಳ್ಳಿ. ಸಾಲ ಮನ್ನಾ ಕುರಿತಂತೆ ಅಭಿಪ್ರಾಯ ಪಡೆಯಲು ಸಭೆ ಕರೆಯಲಾಗಿದೆ. ಯಾರೇ ಮಾತನಾಡಿದರೂ ಅವರವರ ಅಭಿಪ್ರಾಯವಾಗುತ್ತದೆ. ಸರ್ಕಾರದ ಅಭಿಪ್ರಾಯವಲ್ಲ, ತಾಳ್ಮೆಯಿಂದ ಅಭಿಪ್ರಾಯ ತಿಳಿಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ