ನವದೆಹಲಿ, ಮೇ 29-ನೈಋತ್ಯ ಮುಂಗಾರು ಮೂರು ದಿನಗಳ ಮೊದಲೇ ಕರಾವಳಿ ರಾಜ್ಯ ಕೇರಳ ಪ್ರವೇಶಿಸಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಇದರೊಂದಿಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ನಾಲ್ಕು ತಿಂಗಳ ಕಾಲ ಮುಂಗಾರು ಮಳೆಯ ಸಿಂಚನವಾಗಲಿದೆ.
ನೈಋತ್ಯ ಮುಂಗಾರು ಜೂನ್ 1ರಂದು ಕೇರಳ ಪ್ರವೇಶಿಸಲಿದೆ ಎಂದು ಈ ಹಿಂದೆ ಹವಾಮಾನ ಇಲಾಖೆ ವರದಿ ಮಾಡಿತ್ತು. ಮುಂಗಾರು ಮಳೆ ಹಿನ್ನೆಲೆಯಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ ತಮಿಳುನಾಡು, ಹಾಗೂ ಪುದುಚೇರಿ ರಾಜ್ಯಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸಾಗಿವೆ.
ಮುಂಗಾರು ಮಾರುತಗಳ ಪ್ರವೇಶದಿಂದ ಕೇರಳದ ವೈಯ್ನಾಡ್ ಘಟ್ಟ ಪ್ರದೇಶದಲ್ಲಿ ಮಳೆಯ ಶುಭಾರಂಭವಾಗಿದೆ. ನೈಋತ್ಯ ಮಾರುತಗಳ ಮೊದಲು ದಕ್ಷಿಣ ರಾಜ್ಯಗಳನ್ನು ಪ್ರವೇಶಿಸಿ ನಂತರ ಒಂದೂವರೆ ತಿಂಗಳಿನಲ್ಲಿ ಇಡೀ ದೇಶವನ್ನು ವ್ಯಾಪಿಸಲಿದೆ ಎಂದು ಐಎಂಡಿ ಹೆಚ್ಚುವರಿ ಮಹಾ ನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ತಿಳಿಸಿದ್ದಾರೆ. ಈ ವರ್ಷ ದೇಶಾದ್ಯಂತ ಸಾಧಾರಣ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೈಋತ್ಯ ಮುಂಗಾರು ಮಾರುತಗಳು ನಿನ್ನೆ ರಾತ್ರಿಯೇ ಕೇರಳ ಪ್ರವೇಶಿವೆ ಎಂದು ಐಎಂಡಿ ಪ್ರತಿಸ್ಪರ್ಧಿ ಹವಾಮಾನ ಮುನ್ಸೂಚನೆ ಖಾಸಗಿ ಸಂಸ್ಥೆ ಸ್ಕೈಮೆಟ್ ವರದಿ ಮಾಡಿದೆ.
ಜೂ.10ರ ನಂತರ ಮಿನಿಕೋಯ್, ಅಮಿನಿ, ತಿರುವನಂತಪುರಂ, ಪುಣಲೂರ್, ಕೊಲ್ಲಂ, ಅಳಪುಳ, ಕೊಟ್ಟಾಯಂ, ಕೊಚ್ಚಿ, ತ್ರಿಸ್ಸೂರ್, ಕೋಳಿಕೋಡ್, ತಲಸ್ಸೇರಿ, ಕಣ್ಣೂರು, ಕುಡುಲು ಮತ್ತು ಮಂಗಳೂರು-ಈ 14 ಕೇಂದ್ರದಲ್ಲಿ ಶೇ.60ರಷ್ಟು ಮಳೆಯಾಗುವ ಸಾಧ್ಯತೆ ಬಗ್ಗೆ ಮುನ್ಸೂಚನೆ ಲಭಿಸಿದೆ. ಈ ಪ್ರದೇಶಗಳಲ್ಲಿ ಸತತ ಎರಡು ದಿನಗಳ ಕಾಲ 2.5 ಮಿ.ಮೀ. ಅಥವಾ ಅದಕ್ಕೂ ಹೆಚ್ಚು ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ ಎಂದು ಮುನ್ಸೂಚನೆಯೂ ಇದೆ.