ನವದೆಹಲಿ, ಮೇ 29-ಬ್ಯಾಂಕ್‍ಗಳು ಮತ್ತು ಹಣಕಾಸು ಸಂಸ್ಥೆಗಳು 12 ಕೋಟಿ ಫಲಾನುಭವಿಗಳಿಗೆ 6 ಲಕ್ಷ ಕೋಟಿ ರೂ.ಗಳ ಮುದ್ರಾ ಸಾಲ ಸೌಲಭ್ಯಗಳನ್ನು ವಿತರಿಸಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಅವರು, ಅಸಹಾಯಕರಿಗೆ ಸಾಲ ಸೌಲಭ್ಯಗಳನ್ನು ನೀಡುವ ಕೇಂದ್ರ ಸರ್ಕಾರ ಯೋಜನೆ ಅಡಿ ನೆರವು ನೀಡಲಾಗಿದೆ ಎಂದರು.
ಈವರೆಗೆ ಬ್ಯಾಂಕ್‍ಗಳು ಮತ್ತು ಆರ್ಥಿಕ ಸಂಸ್ಥೆಗಳ ಮೂಲಕ 12 ಕೋಟಿ ಅರ್ಹ ಫಲಾನುಭವಿಗಳಿಗೆ 6 ಲಕ್ಷ ಕೋಟಿ ರೂ.ಗಳನ್ನು ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿ ವಿತರಿಸಲಾಗಿದೆ ಎಂದು ಮೋದಿ ಹೇಳಿದರು.
12 ಕೋಟಿ ಫಲಾನುಭವಿಗಳಲ್ಲಿ ಶೇ.28ರಷ್ಟು ಅಥವಾ 3.25 ಕೋಟಿ ಮಂದಿ ಪ್ರಥಮ ಬಾರಿಗೆ ಉದ್ಯಮಿಗಳಾದವರು. ಈ ಯೋಜನೆ ಅಡಿ ಸಾಲ ಪಡೆದ ಶೇ.74 ಅಥವಾ 9 ಕೋಟಿ ಮಂದಿ ಮಹಿಳೆಯರು ಹಾಗೂ ಶೇ.55ರಷ್ಟು ಜನರು ಎಸ್‍ಸಿ/ಎಸ್‍ಟಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು.
2015ರ ಏಪ್ರಿಲ್ 8ರಂದು ಪ್ರಧಾನಮಂತ್ರಿ ಮುದ್ರಾ ಯೋಜನೆ ಜಾರಿಗೊಳಿಸಲಾಗಿದ್ದು, ಕಾಪೆರ್Çರೇಟ್‍ರಹಿತ, ಕೃಷಿ ರಹಿತ ಸಣ್ಣ/ಅತಿಸಣ್ಣ ಉದ್ದಿಮೆಗಳಿಗೆ 10 ಲಕ್ಷ ರೂ.ಗಳ ಸಾಲ ನೀಡುವ ಯೋಜನೆ ಇದಾಗಿದೆ.
ನಿನ್ನೆ ಉಜ್ವಲಾ ಯೋಜನೆಯ ಫಲಾನುಭವಿಗಳೊಂದಿಗೆ ಮೋದಿ ಸಂವಾದ ನಡೆಸಿದ್ದರು. ವಿವಿಧ ಕಾರ್ಯಕ್ರಮಗಳ ಫಲಾನುಭವಿಗಳ ಜೊತೆ ಇಂದು ಕೂಡ ಉಪಾಹಾರದೊಂದಿಗೆ ಸಂವಾದ ಮುಂದುವರಿಸಿದರು.