
ಬೆಂಗಳೂರು, ಮೇ 29-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಹುಮತ ಸಾಬೀತಾಗಿ ಒಂದು ವಾರ ಕಳೆದರೂ ಸಂಪುಟ ವಿಸ್ತರಣೆಯ ಬಿಕ್ಕಟ್ಟು ಬಗೆಹರಿದಿಲ್ಲ. ಇನ್ನೂ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ.
ಸಂಪುಟ ವಿಸ್ತರಣೆ ಸಂಬಂಧ ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ನಡೆಸಿದ ಮಾತುಕತೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾದಂತೆ ಕಂಡುಬಂದಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ತಮ್ಮ ತಾಯಿಯವರ ಹೆಚ್ಚಿನ ಚಿಕಿತ್ಸೆಗೆಂದು ಅಮೆರಿಕಾಕ್ಕೆ ಹೋಗಿರುವುದರಿಂದ ಅವರು ಹಿಂತಿರುಗಿ ಬಂದ ಮೇಲೆ ಸಂಪುಟ ವಿಸ್ತರಣೆ ಒಂದು ಅಂತಿಮ ರೂಪ ಸಿಗಲಿದೆ ಎಂದು ಹೇಳಲಾಗಿದೆ.
ಒಂದು ಮೂಲಗಳ ಪ್ರಕಾರ ಕಾಂಗ್ರೆಸ್ ಮತ್ತು ಜೆಡಿಎಸ್ ವರಿಷ್ಠರು ವಿಡಿಯೋ ಕಾನ್ಫರೆನ್ಸ್‍ನಲ್ಲಿ ರಾಹುಲ್‍ಗಾಂಧಿಯವರೊಂದಿಗೆ ಮಾತನಾಡಿ, ಸಂಪುಟ ಸೇರುವವರ ಪಟ್ಟಿಯನ್ನು ಫೈನಲ್ ಮಾಡಿದ್ದು, ಸದ್ಯದಲ್ಲೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.
ಆದರೆ ಅಂತಹ ಲಕ್ಷಣಗಳು ಕಂಡು ಬರುತ್ತಿಲ್ಲ. ಖಾತೆ ಹಂಚಿಕೆ ಸಂಬಂಧ ಮೈತ್ರಿಪಕ್ಷಗಳಲ್ಲಿ ಒಮ್ಮತ ಮೂಡಿದಂತಿಲ್ಲ. ಇನ್ನು ಮಾತುಕತೆ ಮುಂದುವರೆದಿದೆ. ಹಾಗಾಗಿ ಇನ್ನು ಎರಡು-ಮೂರು ದಿನ ತಡವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರಿಗೆ ನಾಳೆ ಒಳ್ಳೆಯ ದಿನ ಎಂದು ಹೇಳಿದ್ದಾರೆ. ಸಾಲ ಮನ್ನಾ ಸಂಬಂಧ ಏನಾದರೂ ಘೋಷಿಸುವ ಸಾಧ್ಯತೆ ಕೂಡ ಇದೆ. ಇಂದು ಅವರು ಜನತಾದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.