ನವದಹೆಲಿ ಮೇ 28-ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆರೋಗ್ಯ ತಪಾಸಣೆಗಾಗಿ ತಾಯಿಯೊಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ನಿನ್ನೆ ರಾತ್ರಿ ವಿದೇಶಕ್ಕೆ ತೆರಳಿದ್ದಾರೆ.
ಸೋನಿಯಾ ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದ ಪದೇ ಪದೇ ನರಳುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಮಗನೊಂದಿಗೆ ಬೆಂಗಳೂರಿಗೆ ಆಗಮಿಸಿದ್ದಾಗಲೂ ಅವರ ಬಳಲಿದಂತೆ ಕಂಡುಬಂದರು.
ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. 2011ರಲ್ಲಿ ಅವರಿಗೆ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಮತ್ತೆ ವಿದೇಶಕ್ಕೆ ತೆರಳಿ ತಪಾಸಣೆಗೆ ಒಳಗಾಗಲಿದ್ದಾರೆ.
ಸೋನಿಯಾ ಜೊತೆ ವಿದೇಶಕ್ಕೆ ತೆರಳಿರುವ ರಾಹುಲ್ ಒಂದು ವಾರದ ಬಳಿಕ ದೆಹಲಿಗೆ ಹಿಂದಿರುಗಲಿದ್ದಾರೆ, ಸೋನಿಯಾ ಅವರಿಗೆ ಚಿಕಿತ್ಸೆ ಮುಂದುವರಿಯಲಿದೆ.
ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿನ ಖಾತೆ ಹಂಚಿಕೆ ಬಿಕ್ಕಟ್ಟು ಮತ್ತು ಉಪ ಚುನಾವಣೆ ಸಂದರ್ಭದಲ್ಲೇ ರಾಹುಲ್ ತಾಯಿಯೊಂದಿಗೆ ವಿದೇಶಕ್ಕೆ ತೆರಳಿದಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ರಾಹುಲ್, ನಾವು ಕೆಲವು ದಿನಗಳ ಕಾಲ ಭಾರತದಿಂದ ಹೊರಗೆ ಹೋಗುತ್ತಿದ್ದೇವೆ. ಸೋನಿಯಾಜಿ ಅವರ ವಾರ್ಷಿಕ ಆರೋಗ್ಯ ತಪಾಸಣೆಗಾಗಿ ಹೋಗುತ್ತಿದ್ದೇನೆ. ಬಿಜೆಪಿ ಸೋಷಿಯಲ್ ಮೀಡಿಯಾ ಟ್ರೋಲ್ ಆರ್ಮಿ (ಬಿಜೆಪಿ ಸಾಮಾಜಿಕ ಮಾಧ್ಯಮದ ಟೀಕಿಸುವವ ಪಡೆ)ಯಲ್ಲಿರುವ ನನ್ನ ಮಿತ್ರರಿಗೆ ನಾನು ಹೇಳುವುದೇನೆಂದರೆ ಏನೆನೋ ಲೆಕ್ಕಾಚಾರ ಮಾಡಬೇಡಿ. ನಾನೂ ಶೀಘ್ರ ಹಿಂದಿರುಗುತ್ತೇನೆ ಎಂದು ಬಿಜೆಪಿಯವರನ್ನು ಕೆಣಕಿದ್ದಾರೆ.
ರಾಹುಲ್ ವಿರುದ್ಧ ಟ್ವಿಟ್ ವಾರ್ಗೆ ಸದಾ ಸಜ್ಜಾಗಿರುವ ಬಿಜೆಪಿ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಸೋನಿಯಾಜೀ ಅವರ ಆರೋಗ್ಯ ಉತ್ತಮವಾಗಿರಲಿ ಎಂದು ಹಾರೈಸುತ್ತೇವೆ. ಸಂಪುಟ ವಿಸ್ತರಣೆಗಾಗಿ ಮಹಿಳೆಯರು ಕಾಯುತ್ತಿದ್ದಾರೆ. ಆ ಮೂಲಕ ರಾಜ್ಯ ಸರ್ಕಾರ ಅವರಿಗೆ ನ್ಯಾಯ ಒದಗಿಸಬಹುದು. ಆದರೆ ನೀವು ವಿದೇಶಕ್ಕೆ ಹೋಗುವುದಕ್ಕೆ ಮುನ್ನ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಸರ್ಕಾರ ಲಭಿಸುತ್ತದೆಯೇ..? ವಿದೇಶದಿಂದಲೂ ನೀವು ನಮಗೆ ಮನರಂಜನೆ ನೀಡುತ್ತೀರಿ ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿನ ಪ್ರತಿಯೊಬ್ಬರೂ ನಿರೀಕ್ಷಿಸುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.