ಬಾಗಲಕೋಟೆ:ಮೇ-28: ರಾಜ್ಯಾದ್ಯಂತ ಬಿಜೆಪಿ ಕರೆ ನೀಡಿರುವ ಬಂದ್ಗೆ ಹಲವೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾದರೆ ಇನ್ನು ಕೆಲವೆಡೆ ಮಾತ್ರ ಬಿಜೆಪಿ ಬಂದ್ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಉತ್ತರ ಕರ್ನಾಟಕ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಮತ್ತು ಹಾವೇರಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ನಿಧನದ ಹಿನ್ನೆಲೆಯಲ್ಲಿ ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಬಂದ್ ವಾಪಸ್ ಪಡೆಯಲಾಗಿದೆ. ಜಿಲ್ಲೆಯ ಜಮಖಂಡಿ, ತೇರದಾಳ, ಮುಧೋಳ ಹಾಗೂ ಬೀಳಗಿ ಕ್ಷೇತ್ರಗಳಲ್ಲಿ ಬಂದ್ ವಾಪಸ್ ಪಡೆಯಲಾಗಿದೆ. ಸೂತಕ ಆವರಿಸಿರುವ ಹಿನ್ನೆಲೆಯಲ್ಲಿ ಬಂದ್ ವಾಪಸ್ ಪಡೆಯಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಬಸ್, ಆಟೋಗಳು ಸಂಚರಿಸುತ್ತಿವೆ.ಶಾಲಾ ಕಾಲೇಜುಗಳಿಗೆ ರಜೆ ಇಲ್ಲ, ಆದರೆ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಇಂದು ನಡೆಯಬೇಕಿದ್ದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಬಿಜೆಪಿ ಕಾರ್ಯಕರ್ತರು ಸಾಂಬ್ರಾ ವಿಮಾನ ನಿಲ್ದಾಣದ ಎದುರು ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡಲಿದ್ದಾರೆ. ಗದಗದಲ್ಲಿ ನಗರದ ಮುಳಗುಂದ ನಾಕಾದಲ್ಲಿ ಬಿಜೆಪಿ ರೈತ ಘಟಕ ಹಾಗೂ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ಮುಳಗುಂದ ನಾಕಾದಲ್ಲಿ ಗದಗ, ಹುಬ್ಬಳ್ಳಿ, ಹೊಸಪೇಟೆ, ಹಾವೇರಿ ರಸ್ತೆ ಬಂದ್ ಮಾಡಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಕುಮಾರಸ್ವಾಮಿ ವಚನ ಭ್ರಷ್ಟ ಎಂದು ಹೆಚ್ಡಿಕೆ ವಿರುದ್ಧ ಘೋಷಣೆ ಕೂಗಿದರು. ರಸ್ತೆ ತಡೆಮಾಡಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಮೂರು ಕ್ಷೇತ್ರ ಬಿಜೆಪಿ ಶಾಸಕರಿರುವುದರಿಂದ ಗದಗ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ವಿಜಯಪುರದಲ್ಲಿನ ಮುದ್ದೇಬಿಹಾಳ ಪಟ್ಟಣ ಬಂದ್ ಆಗಿದೆ. ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿದ್ದಾರೆ.






