ಬೆಂಗಳೂರು :ಮೇ-28: ರಾಜ್ಯದ ಮೈತ್ರಿ ಸರ್ಕಾರದ ಖಾತೆ ಹಂಚಿಕೆ ಪ್ರಕ್ರಿಯೆ ಒಂದೆರಡು ದಿನಗಳೊಳಗೆ ಅಂತಿಮಗೊಳಿಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೂ, ಸಂಪುಟ ರಚನೆ ಅಂತಿಮಕ್ಕೂ ಸಂಬಂಧವಿಲ್ಲ , ಖಾತೆ ಹಂಚಿಕೆ ಅಂತಿಮಗೊಳಿಸಿದ್ದರೂ ಚರ್ಚೆ ಮುಂದುವರೆದಿದೆ. ಇನ್ನೂ ಒಂದೆರಡು ದಿನಗಳಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದಿದ್ದಾರೆ.
ರಾಹುಲ್ ಇಲ್ಲ ಎಂದು ವಿಳಂಬ ಮಾಡುವುದಿಲ್ಲ. ಪೋನ್ ನಲ್ಲಿಯೇ ಅವರು ಸಂಪರ್ಕಕ್ಕೆ ಸಿಗಲಿದ್ದು, ಅಂತಿಮ ಪಟ್ಟಿಯ ಬಗ್ಗೆ ರಾಜ್ಯನಾಯಕರ ಜೊತೆ ಚರ್ಚಿಸಿ , ಕಾಂಗ್ರೆಸ್ ಮುಖ್ಯಸ್ಥರಿಂದ ಒಪ್ಪಿಗೆ ಪಡೆಯಲಾಗುವುದು, ನಾಳೆಯೂ ಸಹ ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಖಾತೆ ಹಂಚಿಕೆ ಕುರಿತಂತೆ ಜೆಡಿಎಸ್ ನೊಂದಿಗಿನ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರುತ್ತವೆ. ಪರಸ್ಪರ ಕೂತು ಚರ್ಚಿಸಿ, ಕೂಡಲೇ ಅದನ್ನು ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ.
ಹಣಕಾಸು, ಗೃಹ, ಲೋಕೋಪಯೋಗಿ, ಇಂಧನ, ಜಲಸಂಪನ್ಮೂಲ, ನಗರಾಭಿವೃದ್ದಿ ಮತ್ತಿತರ ಪ್ರಮುಖ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಒಮ್ಮತ ಏರ್ಪಟ್ಟಿಲ್ಲ ಎನ್ನಲಾಗಿದೆ.