ಈ ಬಾರಿಯ ಕಪ್ ನಮ್ದೇ ಎಂದು ಬಿಂಬಿಸಿಕೊಂಡಿದ್ದ ಘಟಾನುಘಟಿ ತಂಡಗಳು ತರೆಮರೆಗೆ

ಮುಂಬೈ, ಮೇ 27- ಈ ಬಾರಿಯ ಕಪ್ ನಮ್ದೇ ಎಂದು ಬಿಂಬಿಸಿಕೊಂಡಿದ್ದ ಘಟಾನುಘಟಿ ತಂಡಗಳು ತರೆಮರೆಗೆ ಸರಿದಿರುವ ಬೆನ್ನಲ್ಲೇ ಐಪಿಎಲ್ 11ನೆ ಆವೃತ್ತಿಯು ಕ್ರೀಡಾಭಿಮಾನಿಗಳ ಹೃದಯದಲ್ಲಿ ಮಿಂಚಿನ ಸಂಚಲನವನ್ನು ಸೃಷ್ಟಿಸಿದೆ. ಕಳೆದಎರಡು ಐಪಿಎಲ್‍ನಿಂದ ಹೊರಗುಳಿದಿದ್ದ ಮಹೇಂದ್ರಸಿಂಗ್ ಧೋನಿ ಸಾರಥ್ಯದ ಸಿಎಸ್‍ಕೆ ಈ ಬಾರಿಯು ಐಪಿಎಲ್ ಮುಕುಟವನ್ನು ಗೆಲ್ಲುವ ಮೂಲಕ ರೋಹಿತ್‍ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ನಿರ್ಮಿಸಿರುವ ದಾಖಲೆಯನ್ನು ಸರಿಗಟ್ಟುವತ್ತ ದಾಪುಗಟ್ಟಿದ್ದರೆ, ಡೇವಿಡ್ ವಾರ್ನರ್‍ರ ಅನುಪಸ್ಥಿತಿಯಲ್ಲಿ ತಂಡವನ್ನು ತಮ್ಮ ಬ್ಯಾಟಿಂಗ್ ಬಲ ಹಾಗೂ ಚಾಕಚಕ್ಯತೆಯ ನಾಯಕನ ತಂತ್ರಗಳಿಂದ ಸನ್‍ರೈಸರ್ಸ್ ತಂಡವನ್ನು ಅಂತಿಮ ಘಟ್ಟಕ್ಕೇರಿಸಿರುವ ಕೇನ್ ವಿಲಿಯಮ್ಸ್ ಚೊಚ್ಚಲ ಐಪಿಎಲ್ ಗೆಲ್ಲುವ ಹುಮ್ಮಸ್ಸಿನಲ್ಲಿದ್ದು ಪಂದ್ಯವು ಹೈವೋಲ್ಟೇಜ್‍ನಿಂದ ಕೂಡಿದೆ.
ಮಿಂಚುತ್ತಿರುವ ನಾಯಕರು:
ಸಿಎಸ್‍ಕೆ ಹಾಗೂ ಸನ್‍ರೈಸರ್ಸ್ ತಂಡಗಳ ನಾಯಕತ್ವವನ್ನು ಹೊತ್ತುಕೊಂಡಿರುವ ಕೂಲ್‍ಕ್ಯಾಪ್ಟನ್ ಮಹೇಂದ್ರಸಿಂಗ್ ಧೋನಿ ಹಾಗೂ ಕೇನ್ ವಿಲಿಯಮ್ಸ್ ತಮ್ಮ ತಂಡಗಳ ಪರ ರನ್ ಹೊಳೆಯನ್ನೇ ಹರಿಸುತ್ತಾ ಗೆಲುವು ಕಾಣುತ್ತಿದ್ದು ಇಂದಿನ ಪಂದ್ಯದಲ್ಲಿ ತಮ್ಮ ಬ್ಯಾಟ್‍ನಿಂದ ರನ್ ಹೊಳೆ ಹರಿಸುವ ಹುಮ್ಮಸ್ಸಿನಲ್ಲಿದ್ದಾರೆ.
ಎಸ್‍ಆರ್‍ಎಚ್‍ನ ನಾಯಕ ಕೇನ್ ವಿಲಿಯಮ್ಸ್ ಈ ಬಾರಿಯ ಆರೇಂಜ್ ಕ್ಯಾಪ್ (ಅತಿ ಹೆಚ್ಚು ರನ್ ಗಳಿಸಿದವರಿಗೆ ನೀಡುವ ಗೌರವ)ಗೆ ಅರ್ಹರಾಗಿದ್ದು ಆಡಿರುವ 16 ಪಂದ್ಯಗಳಲ್ಲಿ 8 ಅರ್ಧಶತಕ ಒಳಗೊಂಡ 688 ರನ್‍ಗಳನ್ನು ಗಳಿಸಿದ್ದಾರೆ. ಎಸ್‍ಆರ್‍ಎಚ್ ತಂಡದಲ್ಲಿ ಕೇನ್ ವಿಲಿಯಮ್ಸ್‍ಗೆ ಸಾಥ್ ನೀಡಲು ಶಿಖರ್ ಧವನ್ ( 471 ರನ್), ಮನೀಷ್ ಪಾಂಡೆ (284 ರನ್) , ಯೂಸಫ್ ಪಠಾಣ್ ಇರುವುದರಿಂದ ದೊಡ್ಡ ಮೊತ್ತವನ್ನು ಕಲೆ ಹಾಕುವ ಸೂಚನೆ ಇದೆ.
ಸಿಎಚ್‍ಕೆಯಲ್ಲೂ ಮಹೇಂದ್ರಸಿಂಗ್ ಧೋನಿ( 455 ರನ್, 6 ಅರ್ಧಶತಕ), ಶೇನ್ ವಾಟ್ಸನ್ (438 ರನ್), ಅಂಬಟಿರಾಯುಡು( 586 ರನ್, 1 ಶತಕ, 3 ಅರ್ಧಶತಕ), ಸುರೇಶ್‍ರೈನಾ (413 ರನ್) ಬೃಹತ್ ಮೊತ್ತ ಕಲೆ ಹಾಕಿದ್ದು ಫೈನಲ್ಸ್‍ನಲ್ಲೂ ತಮ್ಮ ಬ್ಯಾಟಿಂಗ್‍ನಿಂದ ರನ್‍ಗಳ ಹೊಳೆಯನ್ನೇ ಹರಿಸುವತ್ತ ಚಿತ್ತ ಹರಿಸಿದ್ದಾರೆ.
ಸ್ಪಿನ್ನರ್‍ಗಳ ತಂತ್ರ:
ಫೈನಲ್‍ಗೇರಿರುವ ಸಿಎಸ್‍ಕೆ ಹಾಗೂ ಸನ್‍ರೈಸರ್ಸ್ ಹೈದ್ರಾಬಾದ್ ತಂಡಗಳಲ್ಲಿ ಬ್ಯಾಟಿಂಗ್‍ಗೆ ತಕ್ಕಂತೆ ಬೌಲಿಂಗ್‍ನಲ್ಲೂ ಸಮತೋಲನವನ್ನು ಕಾಯ್ದುಕೊಂಡಿದ್ದು, ತಂಡಗಳಲ್ಲಿರುವ ಡ್ವೇನ್ ಬ್ರಾವೊ (13 ವಿಕೆಟ್), ಶಾರ್ದೂಲ್ ಠಾಕೂರ್ (15 ವಿಕೆಟ್), ಭುವನೇಶ್ವರ್‍ಕುಮಾರ್ ( 9 ವಿಕೆಟ್) ಮಿಂಚುತ್ತಿದ್ದರೆ ತಂಡಗಳಲ್ಲಿರುವ ಸ್ಪಿನ್ನರ್‍ಗಳು ಕೂಡ ತಮ್ಮ ಜಾದೂವನ್ನೂ ಪ್ರದರ್ಶಿಸುತ್ತಿದ್ದಾರೆ.
ಎರಡೂ ತಂಡಗಳಲ್ಲಿ ಸ್ಪಿನ್ನರ್‍ಗಳು ಕೇವಲ ಬೌಲಿಂಗ್‍ನಿಂದ ಮಾತ್ರವಲ್ಲದೆ ಬ್ಯಾಟಿಂಗ್‍ನಿಂದಲೂ ತಮ್ಮ ತಂಡಕ್ಕೆ ಆಸರೆಯಾಗಿ ನೀಂತಿದ್ದಾರೆ.
ಸನ್‍ರೈಸರ್ಸ್ ತಂಡ ಫೈನಲ್‍ಗೇರುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ರಶೀದ್ ಖಾನ್ ಇಂದಿನ ಪಂದ್ಯದಲ್ಲೂ ಕೂಡ ಪ್ರಮುಖ ಆಕರ್ಷಣೆ ಆಗಿದ್ದಾರೆ. ರಶೀದ್ ಆಡಿರುವ 16 ಪಂದ್ಯಗಳಿಂದ 21 ವಿಕೆಟ್‍ಗಳನ್ನು ಕಬಳಿಸಿದ್ದು ಇನ್ನೂ 3 ವಿಕೆಟ್ ಕಬಳಿಸಿದರೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿಯೂ ಹೊರಹೊಮ್ಮಲಿದ್ದಾರೆ.
ರಶೀದ್‍ಗೆ ಉತ್ತಮ ಸಾಥ್ ನೀಡುತ್ತಿರುವ ಬಾಂಗ್ಲಾ ಮೂಲದ ಶಕೀಬ್ ಅಲ್ ಹಸನ್ (14 ವಿಕೆಟ್), ಸಿದ್ದಾರ್ಥ್ ಕೌಲ್(21 ವಿಕೆಟ್) ಕಬಳಿಸಿ ಮಿಂಚುತ್ತಿದ್ದು ಫೈನಲ್ಸ್‍ನಲ್ಲಿ ಮಹೇಂದ್ರಸಿಂಗ್ ಧೋನಿ ಬಳಗದ ಬ್ಯಾಟಿಂಗ್ ಗೆ ಬ್ರೇಕ್ ಹಾಕಲು ಕಾತರದಿಂದಿದ್ದಾರೆ.
ಎಸ್‍ಆರ್‍ಎಚ್‍ನಂತೆಯೇ ಚೆನ್ನೈ ಸೂಪರ್‍ಕಿಂಗ್ಸ್‍ನಲ್ಲೂ ಅನುಭವಿ ಹರ್ಭಜನ್‍ಸಿಂಗ್, ರವೀಂದ್ರಾಜಾಡೇಜಾ, ನಿಗಡಿ ಅವರು ತಮ್ಮ ಸ್ಪಿನ್ ಜಾದೂವನ್ನೂ ಪ್ರದರ್ಶಿಸಿ ಬಲಿಷ್ಠ ಬ್ಯಾಟಿಂಗ್ ಬಲವನ್ನು ಹೊಂದಿರುವ ಹೈದ್ರಾಬಾದ್ ತಂಡದ ಬ್ಯಾಟಿಂಗ್ ಬಲದ ವೇಗವನ್ನು ತಗ್ಗಿಸುವ ಜಾಣ್ಮೆಯನ್ನು ಪ್ರದರ್ಶಿಸಿದರೆ ಮತ್ತೊಂದು ಬಾರಿ ಮಹಿ ಪಡೆ ಚಾಂಪಿಯ್ಸ್ ಆಗಿ ಬೀಗಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ