ನವದೆಹಲಿ, ಮೇ 27-ಪರಿಸರ, ವನ್ಯಜೀವಿ ಮತ್ತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಳಪೆ ಪ್ಲಾಸ್ಟಿಕ್ ಮತ್ತು ಪಾಲಿಥಿನ್ಗಳ ಬಳಕೆಯನ್ನು ಸಾಧ್ಯವಾದಷ್ಟೂ ನಿಯಂತ್ರಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಸಲಹೆ ಮಾಡಿದ್ದಾರೆ.
ಪ್ರತಿ ಮಾಸಾಂತ್ಯದಲ್ಲಿ ಬಾನುಲಿಯಲ್ಲಿ ಬಿತ್ತರವಾಗುವ ಜನಪ್ರಿಯ ಮನ್ ಕಿ ಬಾತ್ (ಮನದ ಮಾತು) ಬಾನುಲಿ ಭಾಷಣದಲ್ಲಿ ಜನರಿಗೆ ಕೆಲವು ಮಹತ್ವದ ಸಲಹೆಗಳನ್ನು ಮಾಡಿದ ಮೋದಿ, ಜೂನ್ 5ರ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಕರೆ ನೀಡಿದರು.
ಸಸಿಗಳನ್ನು ನೆಡಬೇಕು ಎಂದು ಕರೆ ನೀಡಿದ ಅವರು ಸಸಿಗಳನ್ನು ನೆಟ್ಟ ನಂತರ ತಮ್ಮ ಕರ್ತವ್ಯ ಮುಗಿಯಿತು ಎಂದು ಜನರು ಭಾವಿಸಬಾರದು ಅದು ಬೆಳೆದು ಮರವಾಗುವ ತನಕ ಪೆÇೀಷಿಸುವ ಜವಾಬ್ದಾರಿ ಹೊರಬೇಕು ಎಂದರು.
ಪರಿಸರ ಸಂರಕ್ಷಣೆ ಹಾಗೂ ಪ್ರಕೃತಿಯತ್ತ ಒಲವು ಜನರಲ್ಲಿ ಸ್ವಾಭಾವಿಕವಾಗಿ ಮೂಡಿಬರಬೇಕು. ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ಭಾರೀ ಧೂಳಿನಿಂದ ಕೂಡಿದ ಬಿರುಗಾಳಿ ಮಳೆ ಅಸಾಂದರ್ಭಿಕವಾದುದು. ಇಂಥ ಪ್ರತಿಕೂಲ ವಾತಾವರಣ ಜನರು ಸಾವು-ನೋವು, ಆಸ್ತಿ-ಪಾಸ್ತಿ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಅವರು 44ನೇ ಮನ್ ಕಿ ಬಾತ್ನಲ್ಲಿ ವಿಷಾದ ವ್ಯಕ್ತಪಡಿಸಿದರು.
ಈ ವರ್ಷ ಭಾರತವು ವಿಶ್ವ ಪರಿಸರ ದಿನಾಚರಣೆಯ ಜಾಗತಿಕ ಅತಿಥ್ಯ ವಹಿಸಿದೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಇದು ನಮ್ಮ ದೇಶದ ಪ್ರಮುಖ ಸಾಧನೆಗೆ ಸಂದ ಗೌರವ. ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನೆ ಈ ವರ್ಷದ ಧ್ಯೇಯವಾಕ್ಯವಾಗಿದೆ. ಹೀಗಾಗಿ ಕೆಳ ಗುಣಮಟ್ಟದ ಪ್ಲಾಸ್ಟಿಕ್ ಮತ್ತು ಪಾಲಿಥಿನ್ ಬಳಕೆಗೆ ನಾವು ಕಡಿವಾಣ ಹಾಕಬೇಕು. ಪರಿಸರ ಸಂರಕ್ಷಣೆ ಮತ್ತು ಜನರ ಆರೋಗ್ಯಕ್ಕೆ ಅದ್ಯತೆ ನೀಡಬೇಕೆಂದು ಅವರು ಕರೆ ನೀಡಿದರು.