ಮೂರು ವರ್ಷಗಳಲ್ಲಿ ದೇಶಾದ್ಯಂತ 28,000 ಕಿ.ಮೀ. ಹೆದ್ದಾರಿಗಳನ್ನು ಅಭಿವೃದ್ಧಿಗೊಳಿಸಲು 3 ಲಕ್ಷ ಕೋಟಿ ರೂ.ಗಳ ಖರ್ಚು – ಮೋದಿ

ಬಾಗ್‍ಪತ್, ಮೇ 27-ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ 28,000 ಕಿ.ಮೀ. ಹೆದ್ದಾರಿಗಳನ್ನು ಅಭಿವೃದ್ಧಿಗೊಳಿಸಲು 3 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶ ಬಾಘ್‍ಪತ್‍ನಲ್ಲಿ 11,000 ಕೋಟಿ ರೂ.ಗಳ ವೆಚ್ಚದ ದೇಶದ ಪ್ರಥಮ ಸಮರ್ಥ ಮತ್ತು ಹಸಿರು ಸಮನಾಂತರ (ಈಸ್ಟರ್ನ್ ಫೆರಿಫೆರಲ್ ಎಕ್ಸ್‍ಪ್ರೆಸ್ ಹೈವೇ) ಹೆದ್ದಾರಿಯನ್ನು ಸೇವೆಗೆ ಸಮರ್ಪಿಸಿ ರೋಡ್ ಶೋ ನಡೆಸಿದ ನಂತರ ಅವರು ಮಾತನಾಡಿದರು.
ಈ ಹಿಂದೆ ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಪ್ರತಿದಿನ ಕೇವಲ 12 ಕಿ.ಮೀ. ಉದ್ದದ ಹೆದ್ದಾರಿಗಳನ್ನು ನಿರ್ಮಿಸಿದ್ದರೆ, ತಮ್ಮ ನೇತೃತ್ವದ ಎನ್‍ಡಿಎ ಸರ್ಕಾರ ದಿನಕ್ಕೆ 27 ಕಿ.ಮೀ. ಉದ್ದದ ಹೈವೇಗಳನ್ನು ನಿರ್ಮಿಸಿ ಸಾಧನೆ ಮಾಡಿದೆ ಎಂದು ಅವರು ಹೇಳಿದರು.
ದಲಿತರ ರಕ್ಷಣೆಗೆ ಬದ್ಧ: ದಲಿತರ ರಕ್ಷಣೆಗೆ ಕೇಂದ್ರ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಪುನರುಚ್ಚರಿಸಿದ ಮೋದಿ, ಅವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಹೇಳಿದರು.
ಉತ್ತರ ಪ್ರದೇಶದ ಅಭಿವೃದ್ದಿ ಕುರಿತು ಮಾತನಾಡಿದ ಅವರು, ಈ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹತೋಟಿಯಲ್ಲಿದೆ. ಕ್ರಿಮಿನಲ್‍ಗಳು ಪೆÇಲೀಸರಿಗೆ ಶರಣಾಗಿ ಇನ್ನು ಮುಂದೆ ಕಾನೂನು ಬಾಹಿರ ಚಟುವಟಿಕೆಗಳನ್ನು ಕೈಗೊಳ್ಳುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ ಎಂದು ಹೇಳಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರೂ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಧಾನಿ ಮೋದಿ ಅವರು ಇಂದು ಒಟ್ಟು 18,500 ಕೋಟಿ ರೂ.ಗಳ ವೆಚ್ಚದ ಎರಡು ಮಹತ್ವದ ಹೆದ್ದಾರಿಗಳನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.
ಇದಕ್ಕೂ ಮುನ್ನ 7,500 ಕೋಟಿ ರೂ.ಗಳ ವೆಚ್ಚದ ದೆಹಲಿ-ಮೀರತ್ ಎಕ್ಸ್‍ಪ್ರೆಸ್‍ವೇನ ಮೊದಲ ಹಂತಕ್ಕೆ ಮೋದಿ ಚಾಲನೆ ನೀಡಿದರು.
ದೆಹಲಿಯ ಸರೈ ಕಾಲೇ ಖಾನ್‍ನಿಂದ ಯುಪಿ ಗೇಟ್‍ವರೆಗೆ 14 ಮಾರ್ಗಗಳ ಹೈವೇ ಉದ್ಘಾಟನೆ ಬಳಿಕ ಮೋದಿ ತೆರೆದ ಜೀಪಿನಲ್ಲಿ ಪ್ರಯಾಣಿಸಿ ಹೆದ್ದಾರಿಗಳ ಇಕ್ಕೆಲಗಳಲ್ಲಿ ನಿಂತಿದ್ದ ಅಪಾರ ಜನರತ್ತ ಕೈಬೀಸಿದರು. ಭೂ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಸಹ ಪ್ರತ್ಯೇಕ ತೆರೆದ ವಾಹನದಲ್ಲಿ ಮೋದಿ ಅವರನ್ನು ಹಿಂಬಾಲಿಸಿದರು.
ದೆಹಲಿ-ಮೀರತ್ ಎಕ್ಸ್‍ಪ್ರೆಸ್ ವೇನ 9 ಕಿ.ಮೀ. ಮೊದಲ ಹಂತ ಆರಂಭವಾಗುವ ನಿಜಾಮುದ್ದೀನ್ ಸೇತುವೆಯಿಂದ ಮೋದಿ ಅವರ ರೋಡ್‍ಶೋ ನಡೆಯಿತು. ಈ ಮಾರ್ಗದಲ್ಲಿ ಆರು ಕಿ.ಮೀ. ತೆರೆದ ಜೀಪಿನಲ್ಲಿ ಸಂಚರಿಸಿ ಗಮನ ಸೆಳೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ