ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ, ಸಂಪುಟ ವಿಸ್ತರಣೆ ಕಸರತ್ತು ಕಾಂಗ್ರೆಸ್‍ನಲ್ಲಿ ಮುಂದುವರಿದಿದೆ

ನವದೆಹಲಿ, ಮೇ 27- ಸಚಿವ ಸಂಪುಟ ವಿಸ್ತರಣೆ ಕಸರತ್ತು ಕಾಂಗ್ರೆಸ್‍ನಲ್ಲಿ ಮುಂದುವರಿದಿದೆ. ಸಂಪುಟಕ್ಕೆ ಯಾರನ್ನು ಶಿಫಾರಸು ಮಾಡಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖಂಡರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ವರಿಷ್ಠರು ಇಂದು ಕೂಡ ಮಹತ್ವದ ಚರ್ಚೆ ನಡೆಸಿದರು.
ನಿನ್ನೆ ತಡರಾತ್ರಿವರೆಗೆ ನಡೆದ ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಇಂದು ಸಭೆ ಸೇರಿ ಆಕಾಂಕ್ಷಿಗಳೊಂದಿಗೆ ಮಾತುಕತೆ ನಡೆಸಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ 23 ಸಚಿವ ಸ್ಥಾನಗಳು ಕಾಂಗ್ರೆಸ್‍ಗೆ ಲಭ್ಯವಾಗಲಿದ್ದು, ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಜಾತಿವಾರು, ಪ್ರಾದೇಶಿಕತೆ, ಪಕ್ಷನಿಷ್ಠೆ, ಹಿರಿತನ, ಸಾಮಾಜಿಕ ನ್ಯಾಯದ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕಾಗಿದೆ. ಅಲ್ಲದೆ, ಮೈತ್ರಿ ಸರ್ಕಾರವಿರುವುದರಿಂದ ಜೆಡಿಎಸ್ ಪಕ್ಷ ಕೂಡ ಹಲವು ಷರತ್ತುಗಳನ್ನು ಮುಂದಿಡುತ್ತದೆ. ಷರತ್ತುಗಳಿಗನ್ವಯವಾಗುವಂತೆ ಸಂಪುಟಕ್ಕೆ ಕಾಂಗ್ರೆಸ್ ಹೆಸರನ್ನು ಶಿಫಾರಸು ಮಾಡಬೇಕಾಗುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಇಂದು ಗಹನ ಚರ್ಚೆ ನಡೆಸಲಿರುವ ರಾಹುಲ್‍ಗಾಂಧಿ ಹಾಗೂ ಮುಖಂಡರು ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.
ಸಚಿವ ಸಂಪುಟಕ್ಕೆ ಎಲ್ಲರನ್ನೂ ಏಕಕಾಲದಲ್ಲಿ ನೇಮಕ ಮಾಡಬೇಕೆ ಅಥವಾ ಎರಡು ಹಂತಗಳಲ್ಲಿ ನೇಮಿಸಬೇಕೆ ಎಂಬ ಬಗ್ಗೆ ಮುಖಂಡರು ಚರ್ಚಿಸಿದ್ದಾರೆ. ಮೊದಲ ಹಂತದಲ್ಲಿ 16 ಸಚಿವರು, ಎರಡನೆ ಹಂತದಲ್ಲಿ 7 ಸಚಿವರನ್ನು ಸಂಪುಟಕ್ಕೆ ಶಿಫಾರಸು ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಇಂದು ಸಂಜೆ ಒಂದು ನಿರ್ಧಾರಕ್ಕೆ ಬರಲಾಗುತ್ತದೆ.
ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಎಂ.ಕೃಷ್ಣಪ್ಪ, ಯು.ಟಿ.ಖಾದರ್, ಲಕ್ಷ್ಮಿ ಹೆಬ್ಬಾಳ್ಕರ್, ರಾಮಲಿಂಗಾರೆಡ್ಡಿ, ಎಚ್.ಎಂ.ರೇವಣ್ಣ, ಎಂ.ಆರ್.ಸೀತಾರಾಂ, ಶಾಮನೂರು ಶಿವಶಂಕರಪ್ಪ, ಕೆ.ಜೆ.ಜಾರ್ಜ್, ರೋಷನ್ ಬೇಗ್, ದಿನೇಶ್ ಗುಂಡೂರಾವ್, ಆರ್.ನರೇಂದ್ರ, ಸತೀಶ್ ಜಾರಕಿಹೊಳಿ, ರೂಪಾ ಶಶಿಧರ್, ಶಿವಾನಂದ್ ಪಾಟೀಲ್, ರಾಜಶೇಖರ್ ಪಾಟೀಲ್, ರಹೀಂ ಖಾನ್, ಪ್ರಿಯಾಂಕ ಖರ್ಗೆ, ಎಂ.ಟಿ.ಬಿ.ನಾಗರಾಜ್, ಸಿ.ಎಸ್.ಶಿವಳ್ಳಿ, ಟಿ.ರಘುಮೂರ್ತಿ, ಎಂ.ಬಿ.ಪಾಟೀಲ್ ಮುಂತಾದವರು ಸಚಿವ ಸ್ಥಾನಾಕಾಂಕ್ಷಿಗಳಾಗಿದ್ದು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.
ಪ್ರಾದೇಶಿಕತೆ, ಜಾತಿ ಹಿರಿತನವನ್ನು ಪರಿಗಣಿಸಿ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಒಂದೇ ಹಂತದಲ್ಲಿ ನೀಡುವುದು ಸೂಕ್ತವೋ ಅಥವಾ ಎರಡು ಹಂತದಲ್ಲಿ ನೀಡಬೇಕೋ ಎಂಬುದರ ಬಗ್ಗೆಯೂ ಕೂಡ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು. ಅಲ್ಲದೆ, ರಾಹುಲ್‍ಗಾಂಧಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಕೂಡ ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಅಂದುಕೊಂಡಂತೆ ಎಲ್ಲವೂ ಆದರೆ ಇಂದೇ ಸಂಪುಟದ ಸಚಿವರ ತೀರ್ಮಾನವಾಗುವ ಸಾಧ್ಯತೆಯಿದ್ದು, ಅಂತಿಮಗೊಂಡರೆ ವಾರಾಂತ್ಯದಲ್ಲಿ ಸಂಪುಟ ವಿಸ್ತರಣೆಯಾಗಲಿದೆ.
ಜೂ.11ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಪರಮೇಶ್ವರ್ ಅವರು ಉಪಮುಖ್ಯಮಂತ್ರಿ ಹಾಗೂ ಸಚಿವರಾಗುವುದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವುಗೊಳಿಸಬೇಕಾಗುತ್ತದೆ. ಹಾಗಾಗಿ ಆ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬುದರ ಬಗ್ಗೆಯೂ ಕೂಡ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ.
ಮೇಲ್ಮನೆಗೆ ನಾಲ್ಕು ಸ್ಥಾನಗಳು ಕಾಂಗ್ರೆಸ್‍ಗೆ ದೊರೆಯಲಿವೆ. ಈ ಸ್ಥಾನಗಳಿಗೆ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆಯೂ ಕೂಡ ಮಾತುಕತೆ ನಡೆದಿದೆ. ಸಚಿವ ಸ್ಥಾನಾಕಾಂಕ್ಷಿಗಳು, ಮೇಲ್ಮನೆ ಟಿಕೆಟ್ ಆಕಾಂಕ್ಷಿಗಳು, ಕೆಪಿಸಿಸಿ ಅಧ್ಯಕ್ಷ ಪದವಿ ಮೇಲೆ ಕಣ್ಣಿಟ್ಟಿರುವವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.
2019ರ ಲೋಕಸಭೆ ಚುನಾವಣೆ ಎದುರಾಗುತ್ತಿದ್ದು, 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಕೇವಲ 78 ಸ್ಥಾನಗಳನ್ನು ಪಡೆಯಬೇಕಾಯಿತು. ಸಮರ್ಥ ಆಡಳಿತ ನೀಡಿದರೂ ಜನಮನ್ನಣೆ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ 2019ರ ಚುನಾವಣೆಗೆ ಯಾರು ನಾಯಕತ್ವ ವಹಿಸಬೇಕು ಎಂಬ ಬಗ್ಗೆಯೂ ಕೂಡ ಗಂಭೀರ ಚರ್ಚೆ ನಡೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ