ವಾಷಿಂಗ್ಟನ್, ಮೇ 27-ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಐತಿಹಾಸಿಕ ಶೃಂಗಸಭೆ ಮಾತುಕತೆ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವಾಗಲೇ ನಿಗದಿಯಾದ ಜೂನ್ 12ರಂದೇ ಸಿಂಗಪುರ್ನಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಜೊತೆ ಚರ್ಚೆ ನಡೆಸುವ ಸಾಧ್ಯತೆಯನ್ನು ತಾವು ಈಗಲೂ ಎದುರು ನೋಡುತ್ತಿರುವುದಾಗಿ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ.
ಸಿಂಗಪುರ್ನಲ್ಲಿ ಜೂನ್ 12ರತ್ತ ನಾವು ಎದುರು ನೋಡುತ್ತಿದ್ದೇವೆ. ಅದು ಬದಲಾವಣೆಯಾಗುವುದಿಲ್ಲ. ಈ ಪ್ರಕ್ರಿಯೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಮುಂದೆ ಏನಾಗುತ್ತದೋ ನೋಡೋಣ ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಉತ್ತರ ಕೊರಿಯಾ ಜೊತೆ ಚಾರಿತ್ರಿಕ ಶೃಂಗಸಭೆ ವಿಷಯದಲ್ಲಿ ನಾವು ಉತ್ತಮವಾದುದನ್ನೇ ಮಾಡುತ್ತಿದ್ದೇವೆ. ಅದು ನಿರೀಕ್ಷಿತ ರೀತಿಯಲ್ಲಿ ಪ್ರಗತಿಯಲ್ಲಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದರು.
ಉತ್ತರ ಕೊರಿಯಾ ಸಂಪೂರ್ಣ ಅಣ್ವಸ್ತ್ರ ನಿಶ್ಶಸ್ತ್ರೀಕರಣವಾಗಬೇಕು ಎಂಬುದನ್ನು ನಾವು ಬಯಸುತ್ತೇವೆ. ಅದು ಸಫಲವಾದರೆ ಅದು ಆ ದೇಶಕ್ಕೂ ಒಳ್ಳೆಯದು, ನೆರೆಹೊರೆ ರಾಷ್ಟ್ರಗಳ ಹಿತಾಸಕ್ತಿಗೂ ಪೂರಕ ಎಂದು ಟ್ರಂಪ್ ಹೇಳಿದರು.