ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುವ ಸಾಧ್ಯತೆ

ನವದೆಹಲಿ, ಮೇ 27-ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುವ ಸಾಧ್ಯತೆ ಇದೆ.
ನಿಗದಿಯಂತೆ ಉಭಯ ಪಕ್ಷಗಳಿಂದ ಸಚಿವರ ಆಯ್ಕೆಯಾಗಿದ್ದರೆ, ಬುಧವಾರ ಸಂಪುಟ ವಿಸ್ತರಣೆಯಾಗಬೇಕಿತ್ತು. ಆದರೆ ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರು ನಡೆಸಿದ ಸಭೆಯಲ್ಲಿ ಒಮ್ಮತಕ್ಕೆ ಬರದ ಹಿನ್ನೆಲೆಯಲ್ಲಿ ಸಂಪುಟ ರಚನೆ ವಿಳಂಬವಾಗುವ ಸಾಧ್ಯತೆ ಎದುರಾಗಿದೆ.
ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸಂಸದ ವೀರಪ್ಪ ಮೊಯ್ಲಿ ಸೇರಿದಂತೆ ಹಲವು ಮುಖಂಡರ ಜೊತೆ ಇಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಸಚಿವರ ಆಯ್ಕೆ ಸಂಬಂಧ ಸಭೆ ನಡೆಸಿದರಾದರೂ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಜಾತಿವಾರು, ಪ್ರಾದೇಶಿಕವಾರು ಆಯ್ಕೆ ಮಾಡಿ ಪಟ್ಟಿ ತರುವಂತೆ ಸೂಚಿಸಿದರು ಎನ್ನಲಾಗಿದೆ.
ಅಲ್ಲದೆ, ಇಂದು ಸಂಜೆ 4 ಗಂಟೆಗೆ ರಾಹುಲ್‍ಗಾಂಧಿಯವರು ಪೂರ್ವನಿಗದಿಯಂತೆ ಅಮೆರಿಕಾಕ್ಕೆ ತೆರಳಲಿದ್ದು, ಅವರು ಹಿಂತಿರುಗಲು ಮೂರು ದಿನಗಳ ಕಾಲ ತಡವಾಗಲಿದೆ. ಹಾಗಾಗಿ ಸಂಪುಟ ಆಯ್ಕೆ ಕಸರತ್ತನ್ನು ಸದ್ಯಕ್ಕೆ ಕೈಬಿಟ್ಟು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರು ಇಂದು ಸಂಜೆ ರಾಜ್ಯಕ್ಕೆ ಹಿಂದಿರುಗಲಿದ್ದಾರೆ ಎಂದು ತಿಳಿದುಬಂದಿದೆ.
ಸಚಿವಾಕಾಂಕ್ಷಿಗಳಾದ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಯು.ಟಿ.ಖಾದರ್, ಲಕ್ಷ್ಮಿಹೆಬ್ಬಾಳ್ಕರ್, ರಾಮಲಿಂಗಾರೆಡ್ಡಿ, ಎಚ್.ಎಂ.ರೇವಣ್ಣ, ಎಂ.ಆರ್.ಸೀತಾರಾಮ್, ಶಾಮನೂರು ಶಿವಶಂಕರಪ್ಪ, ಕೆ.ಜೆ.ಜಾರ್ಜ್, ರೋಷನ್‍ಬೇಗ್, ದಿನೇಶ್‍ಗುಂಡೂರಾವ್, ಆರ್.ನರೇಂದ್ರ, ಸತೀಶ್ ಜಾರಕಿ ಹೊಳಿ, ರೂಪಾಶಶಿಧರ್, ಶಿವಾನಂದ್ ಪಾಟೀಲ್, ರಾಜಶೇಖರ್ ಪಾಟೀಲ್, ರಹೀಮ್ ಖಾನ್, ಪ್ರಿಯಾಂಕ್ ಖರ್ಗೆ, ಎಂ.ಟಿ.ಬಿ.ನಾಗರಾಜ್, ಸಿ.ಎಸ್.ಶಿವಳ್ಳಿ, ಟಿ.ರಘುಮೂರ್ತಿ, ಎಂ.ಬಿ.ಪಾಟೀಲ್ ಮುಂತಾದವರು ನಿನ್ನೆಯಿಂದ ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದರು.
ಇನ್ನು ಹಲವು ಶಾಸಕರು ಕೂಡ ಸಚಿವ ಸ್ಥಾನ ಪಡೆಯಲು ಕೈ ನಾಯಕರೊಂದಿಗೆ ವರಿಷ್ಠರ ಮೇಲೆ ಒತ್ತಡ ತರುತ್ತಿದ್ದರು. ಆದರೆ ಇಂದು ನಡೆದ ಸಭೆಯಲ್ಲಿ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಮೈತ್ರಿ ಸರ್ಕಾರದಲ್ಲಿ ನಿರ್ಧಾರವಾದಂತೆ 24 ಸಚಿವ ಸ್ಥಾನ ಕಾಂಗ್ರೆಸ್‍ಗೆ ಸಿಗಲಿದೆ.
ಈಗಾಗಲೇ ಪರಮೇಶ್ವರ್ ಅವರು ಡಿಸಿಎಂ ಆಗಿದ್ದು, ಅವರಿಗೆ ಒಂದು ಸಚಿವ ಸ್ಥಾನ ನೀಡಿದರೆ ಇನ್ನುಳಿದ 23 ಸ್ಥಾನಗಳಿಗೆ ಪ್ರಾದೇಶಿಕತೆ, ಪಕ್ಷನಿಷ್ಠೆ, ಜೇಷ್ಠತೆ, ಜಾತಿ ಹಾಗೂ ಮುಂಬರುವ 2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ನೀಡುವ ಸಂಬಂಧ ಸುದೀರ್ಘ ಚರ್ಚೆ ನಡೆಯಿತು. ಆದರೂ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ರಾಹುಲ್‍ಗಾಂಧಿ ಅಮೆರಿಕಾದಿಂದ ಹಿಂತಿರುಗಿದ ನಂತರ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು.
ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಜೂ.11ರಂದು ನಡೆಯಲಿರುವ ಮೇಲ್ಮನೆಯಲ್ಲಿ ತೆರವಾಗುವ ಸ್ಥಾನಗಳ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧವೂ ಕೂಡ ಚರ್ಚೆ ನಡೆಸಿದ್ದು, ಸದ್ಯದಲ್ಲೇ ತೀರ್ಮಾನವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ