ಮೈಸೂರಿನಲ್ಲಿ ವಾರ್ಡ್‍ಗಳ ವಿಂಗಡಣೆ, ಜನಪ್ರತಿನಿಧಿಗಳ ಆಕ್ರೋಶ

ಮೈಸೂರು, ಮೇ 26-ಮೈಸೂರಿನಲ್ಲಿ ವಾರ್ಡ್‍ಗಳನ್ನು ವಿಂಗಡಣೆ ಮಾಡಿರುವುದಕ್ಕೆ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಯರ್ ಸೇರಿದಂತೆ ಯಾವುದೇ ಸದಸ್ಯರ ಗಮನಕ್ಕೂ ತಾರದೆ ಮೈಸೂರು ನಗರಪಾಲಿಕೆಯವರು ವಾರ್ಡ್‍ಗಳನ್ನು ವಿಂಗಡಣೆ ಮಾಡಿದ್ದಾರೆ. ಹಾಗಾಗಿ ಜನಪ್ರತಿನಿಧಿಗಳು ರೊಚ್ಚಿಗೆದ್ದಿದ್ದಾರೆ.
ಈ ಹಿಂದೆ ಅಗ್ರಹಾರ ವಾರ್ಡ್ ನಂಬರ್ 1 ಆಗಿತ್ತು. ಈಗ ಹೆಬ್ಬಾಳು ಬಡಾವಣೆಯ ಪ್ರದೇಶ ಒಂದನೇ ವಾರ್ಡ್ ಆಗಿದೆ. ಪಾಲಿಕೆ ಅಧಿಕಾರಿಗಳು ಸ್ಥಳ ವೀಕ್ಷಣೆ ಮಾಡದೆ ಕಚೇರಿಯಲ್ಲೇ ಕುಳಿತು ವಿಂಗಡಣೆ ಮಾಡಿದ್ದಾರೆ. ಇದರಿಂದ ಹಾಲಿ, ಮಾಜಿ ಪಾಲಿಕೆ ಸದಸ್ಯರು ಮತ್ತು ಮೇಯರ್‍ಗೆ ವಾರ್ಡ್‍ಗಳ ವಿಂಗಡಣೆಯ ಬಿಸಿ ತಟ್ಟಿದೆ. ಮೊದಲನೆಯದಾಗಿ ವಾರ್ಡ್‍ಗಳ ಸಂಖ್ಯೆಯನ್ನು ಬದಲಿಸಿರುವುದು, ಎರಡನೆಯದಾಗಿ ಒಂದು ವಾರ್ಡ್‍ನಲ್ಲಿದ್ದ ಬಡಾವಣೆಗಳು ಮತ್ತು ರಸ್ತೆಗಳನ್ನು ದೂರದಲ್ಲಿರುವ ವಾರ್ಡ್‍ಗಳಿಗೆ ಅಧಿಕಾರಿಗಳು ಸೇರಿಸಿಬಿಟ್ಟಿದ್ದಾರೆ.
ಹೀಗೆ ಬದಲಾವಣೆ ಮಾಡುವ ಮುನ್ನ ಪಾಲಿಕೆ ಸದಸ್ಯರಿಗೆ ಮಾಹಿತಿ ಕೊಡಬೇಕು. ಜನತೆಗೂ ಈ ಕುರಿತು ತಿಳಿಸಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡದೆ ವಾರ್ಡ್‍ಗಳ ಸಂಖ್ಯೆ ಬದಲಾವಣೆ ಮಾಡಿ ಆದೇಶ ಹೊರಡಿಸಿರುವುದಕ್ಕೆ ಜನಪ್ರತಿನಿಧಿಗಳು ಕಿಡಿಕಾರಿದ್ದಾರೆ.
ಅಧಿಕಾರಿಗಳು ಇಂದು ಇರುತ್ತಾರೆ ನಂತರ ಇನ್ನೆಲ್ಲೋ ವರ್ಗಾವಣೆಗೊಂಡು ಹೋಗಿಬಿಡುತ್ತಾರೆ. ನಗರದಲ್ಲೇ ಇರಬೇಕಾದ ಜನರು ಹಾಗೂ ಜನಪ್ರತಿನಿಧಿಗಳಿಗೆ ಇದರಿಂದ ತೊಂದರೆ ಅನುಭವಿಸಬೇಕಾಗಿದೆ.
ಅಧಿಕಾರಿಗಳು ಅವೈಜ್ಞಾನಿಕವಾಗಿ ವಿಂಗಡಣೆ ಮಾಡಿದ್ದಾರೆ ಎಂದು ಪಾಲಿಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ