
ನವದೆಹಲಿ, ಮೇ 26- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಇಂದು ನಾಲ್ಕನೆ ವರ್ಷ ಪೂರೈಸಿ ಐದನೆ ವರ್ಷಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಸರ್ಕಾರದ ಯಶಸ್ಸಿಗೆ ಕಾರಣರಾದ ದೇಶವಾಸಿಗಳಿಗೆ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.
ನನಗೆ ಯಾವಾಗಲೂ ದೇಶವೇ ಮುಖ್ಯ ಹಾಗೂ ರಾಷ್ಟ್ರದ ಜನರ ಹಿತಾಸಕ್ತಿಗೆ ಆದ್ಯತೆ, ಇದಕ್ಕಾಗಿ ತಮ್ಮ ಸರ್ಕಾರ ಸದಾ ಬದ್ಧ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಅಂದರೆ ಮೇ 26, 2014ರಂದು ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿತು. ಆಗಿನಿಂದ ಭಾರತ ಪರಿವರ್ತನೆಯತ್ತ ನಾವು ಕೈಗೊಂಡಿರುವ ಅಭಿಯಾನ ಯಶಸ್ವಿಯಾಗಿ ಮುಂದುವರೆದಿದೆ. ಮುಂದೆಯೂ ಅದು ಇನ್ನಷ್ಟು ಪ್ರಗತಿ ಪರದತ್ತ ಸಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ನಮ್ಮ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ದೇಶದ ಜನತೆ ನೀಡಿರುವ ಬೆಂಬಲ ಮತ್ತು ಸರ್ಕಾರಕ್ಕೆ ನೀಡಿರುವ ಸಹಕಾರವನ್ನು ಈ ಸಂದರ್ಭದಲ್ಲಿ ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ಪ್ರಧಾನಿ ಕೃತಜ್ಞತೆ ಸಲ್ಲಿಸಿದ್ದಾರೆ.