ಶ್ರೀನಗರ, ಮೇ 26-ಕಾಶ್ಮೀರ ಕಣಿವೆಯಲ್ಲಿ ಒಳನುಸುಳಿ ವಿಧ್ವಂಸಕ ಕೃತ್ಯ ಎಸಗುವ ಭಯೋತ್ಪಾದಕರ ಕೃತ್ಯವನ್ನು ವಿಫಲಗೊಳಿಸಿರುವ ಸೇನಾ ಪಡೆ ಐವರು ಉಗ್ರರನ್ನು ಹೊಡೆದುರುಳಿಸಿದೆ.
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗಧರ್ ವಲಯದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ದಾಟಲು ಯತ್ನಿಸುತ್ತಿದ್ದ ಐವರು ಭಯೋತ್ಪಾದಕರನ್ನು ಯೋಧರು ಇಂದು ಮುಂಜಾನೆ ಗುಂಡಿಟ್ಟು ಕೊಂದಿದ್ದಾರೆ.
ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿ ಐವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ಪ್ರದೇಶದಲ್ಲಿ ಅಡಗಿರಬಹುದಾದ ಇತರ ಭಯೋತ್ಪಾದಕರಿಗಾಗಿ ಶೋಧ ಮುಂದುವರಿದಿದೆ ಎಂದು ಶ್ರೀನಗರದಲ್ಲಿ ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.
ಇಂದು ನಸುಕಿನಲ್ಲಿ ಉಗ್ರರ ಗುಂಪೆÇಂದು ಎಲ್ಒಸಿ ಮೂಲಕ ಒಳನುಸುಳಲು ಯತ್ನಿಸಿತು. ತಕ್ಷಣ ಕಾರ್ಯಪ್ರವೃತ್ತರಾದ ಯೋಧರು ಗುಂಡು ಹಾರಿಸಿ ಐವರನ್ನು ಹೊಡೆದುರುಳಿಸಿದರು.
ಪಾಕಿಸ್ತಾನ ಕಳೆದ 12 ದಿನಗಳಿಂದ ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸುತ್ತಿದ್ದು, ಇದೇ ಸಂದರ್ಭ ಬಳಸಿಕೊಂಡು ಕಾಶ್ಮೀರ ಕಣಿವೆಯೊಳಗೆ ನುಗ್ಗಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ವರದಿಗಳಿವೆ.
ಪಾಕ್ ಕುಮ್ಮಕ್ಕಿನೊಂದಿಗೆ ಕಾಶ್ಮೀರದೊಳಗೆ ನುಸುಳಲು ಯತ್ನಿಸುವ ಭಯೋತ್ಪಾದಕರ ಬಗ್ಗೆ ಭಾರತೀಯ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.