ಬೆಂಗಳೂರು, ಮೇ 26-ಕಪ್ಪು ಹಣ ತರುವಲ್ಲಿ, ನಿರುದ್ಯೋಗ ನಿವಾರಣೆಯಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ಸಾಧನೆ ಶೂನ್ಯ ಎಂದು ಆರೋಪಿಸಿರುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ನಗರ ಮಹಾತ್ಮಗಾಂಧಿ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಸಿದರು.
ವಿದೇಶದಲ್ಲಿರುವ ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಜಮಾ ಮಾಡುತ್ತೇನೆ. ಪ್ರತಿವರ್ಷ 2ಕೋಟಿ ಉದ್ಯೋಗ ಸೃಷ್ಟಿ, ಭ್ರಷ್ಟಾಚಾರ ನಿಯಂತ್ರಣ ಮಾಡಲಾಗುವುದು ಎಂದು ಅಧಿಕಾರಕ್ಕೆ ಬಂದ ಮೋದಿಯವರು ಇದ್ಯಾವುದನ್ನೂ ಮಾಡದೆ ವಂಚಿಸಿದ್ದಾರೆ. ಇವರ ಸಾಧನೆ ಶೂನ್ಯ ಎಂದು ಪ್ರತಿಭಟನಾ ನಿರತ ಕಾಂಗ್ರೆಸ್ ಮುಖಂಡರಾದ ಜಿ.ಜನಾರ್ಧನ್, ಎಸ್.ಮನೋಹರ್, ಆನಂದ್, ಶೇಖರ್ ಮತ್ತಿತರರು ಆರೋಪಿಸಿದರು.
ಕೇಂದ್ರದ ಬಿಜೆಪಿ ಸರ್ಕಾರ ಕೇವಲ ಶ್ರೀಮಂತರ ಪರವಾಗಿ ಆಡಳಿತ ನಡೆಸುತ್ತಿದೆ. ನೋಟು ಅಮಾನೀಕರಣ ಮಾಡಿದ್ದರಿಂದ ಬಡವರಿಗೆ ತೊಂದರೆಯಾಗಿ ಶ್ರೀಮಂತರಿಗೆ ಅನುಕೂಲವಾಯಿತು. ಕಪ್ಪು ಹಣ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನಿರುದ್ಯೋಗ ನಿವಾರಣೆ ಮಾಡಲು ಆಗಲಿಲ್ಲ. ಪೆಟ್ರೋಲ್-ಡೀಸಲ್, ಅಡುಗೆ ಅನಿಲ ದರ ಗಗನಕ್ಕೇರಿದೆ. ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ ಎಂದು ಆರೋಪಿಸಿದರು.