ಬೆಂಗಳೂರು, ಮೇ 26- ಕಾವೇರಿ ನೀರು ಹಂಚಿಕೆ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ನ ಅಂದಿನ ಮುಖ್ಯ ನ್ಯಾಯಮೂರ್ತಿ ಹಾಗೂ ಇಬ್ಬರು ನ್ಯಾಯಮೂರ್ತಿಗಳ ವಿರುದ್ಧ ದೂರು ದಾಖಲಿಸಿದ್ದ ಮಂಡ್ಯದ ಎಂ.ಡಿ.ರಾಜಣ್ಣ ಅವರಿಗೆ ನ್ಯಾಯಾಂಗ ನಿಂದನೆ ಆರೋಪದಡಿ ಕರ್ನಾಟಕ ಹೈಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ರಾಜ್ಯದ ಜನರಿಗೆ ಅನ್ಯಾಯವಾಗಿದೆ ಎಂದು ರಾಜಣ್ಣ ಅವರು ಪ್ರಕರಣ ತೀರ್ಪು ನೀಡಿದ್ದ ನ್ಯಾಯಮೂರ್ತಿಗಳ ವಿರುದ್ದ ಮಂಡ್ಯ ಜಿಲ್ಲಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಕಾವೇರಿ ನೀರು ಹಂಚಿಕೆ ಪ್ರಕರಣ ವಿಚಾರಣೆ ನಡೆಸಿ ತೀರ್ಪು ನೀಡಿದ್ದ ಅಂದಿನ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಮತ್ತು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಉದಯ್ ಲಲಿತ್ ಅವರು ಹಾಗೂ ಕರ್ನಾಟಕ-ತಮಿಳುನಾಡು ಮುಖ್ಯಮಂತ್ರಿಗಳು, ಕೇಂದ್ರ ನೀರಾವರಿ ಇಲಾಖೆ ಕಾರ್ಯದರ್ಶಿ ಹಾಗೂ ರಾಜ್ಯ ನೀರಾವರಿ ಸಚಿವರನ್ನು ಈ ಪ್ರಕರಣದ ಆಪಾದಿತರೆಂದು ರಾಜಣ್ಣ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಅಂತಾರಾಜ್ಯ ನೀರು ಹಂಚಿಕೆ ವಿವಾದದಲ್ಲಿ ನ್ಯಾಯ ತೀರ್ಮಾನ ಮಾಡುವ ಅಧಿಕಾರ ಸುಪ್ರೀಂಕೋರ್ಟ್ಗೆ ಇಲ್ಲ ಕಾನೂನು ರೂಪಿಸಿ ಜಾರಿಗೆ ತರುವ ಅಧಿಕಾರ ಸಂಸತ್ಗಿದೆ. ಈ ವಿಷಯ ಗೊತ್ತಿದ್ದರೂ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು, ನೀರಾವರಿ ಸಚಿವರು ಕಾರ್ಯದರ್ಶಿಯವರು ಹಾಗೂ ಕೇಂದ್ರ ನೀರಾವರಿ ಸಚಿವರು ಸುಪ್ರೀಂಕೋರ್ಟ್ ಮೊರೆ ಹೋಗಿ ಕರ್ನಾಟಕದ ಜನತೆಗೆ ದ್ರೋಹ ಮಾಡಿದ್ದಾರೆ ಎಂದು ರಾಜಣ್ಣ ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.
ಕರ್ನಾಟಕದಿಂದ ತಮಿಳುನಾಡಿಗೆ 10 ದಿನಗಳು ಪ್ರತಿದಿನ 15 ಸಾವಿರ ಕ್ಯೂಸೆಕ್ ನೀರು ಬಿಡಲು ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಕಾನೂನು ಬಾಹಿರ ಎಂದು ವಾದಿಸಿದ್ದ ರಾಜಣ್ಣ, ಸುಪ್ರೀಂಕೋರ್ಟ್ನ ಈ ತೀರ್ಪು ಭಾರತೀಯ ದಂಡ ಸಂಹಿತೆಯ (ಐಪಿಸಿ)ಸೆಕ್ಷನ್ 219ರ ಪ್ರಕಾರ ಅಪರಾಧ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಇವರ ಈ ವಾದ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿರುವ ಹೈಕೋರ್ಟ್ ರಾಜಣ್ಣ ಅವರಿಗೆ ಆರು ತಿಂಗಳ ಕಾಲ ಜೈಲುಶಿಕ್ಷೆ ವಿಧಿಸಿದೆ.