ಬೆಂಗಳೂರು,ಮೇ 26
ಮುಖ್ಯಮಂತ್ರಿಯಾದ ಬಳಿಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಒಂದರಂತೆ ಒಂದು ಸವಾಲು ಎದುರಾಗುತ್ತಿದೆ.
ಶುಕ್ರವಾರ ವಿಧಾನ ಸದನದಲ್ಲಿ ಬಿಜೆಪಿಯವರು ಸಾಲ ಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಕಟ ಬಂದ್ ಮಾಡುತ್ತೇವೆ ಎಂದು ಸಭಾತ್ಯಾಗ ಮಾಡಿ ಹೊರಟಿದ್ದರು. ಈ ತಲೆನೋವಿನ ಜೊತೆ ಸಿಎಂ ಕುಮಾರಸ್ವಾಮಿಗೆ ಸರ್ಕಾರಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ತಲೆನೋವು ಎದುರಾಗಿದೆ.
ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಹೊಸದಾಗಿ ಶಿಫಾರಸು ಕಳುಹಿಸಿ ಕೊಡಬೇಕು. ಹೊಸದಾಗಿ ರಚನೆಯಾಗಿರುವ ರಾಜ್ಯ ಸರ್ಕಾರದಿಂದ ಶಿಫಾರಸು ಬರಬೇಕು. ಅಷ್ಟೇ ಅಲ್ಲದೇ ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬಗ್ಗೆಯೂ ಹೊಸದಾಗಿ ಶಿಫಾರಸು ಕಳುಹಿಸಬೇಕು ಎಂದು ಕುಮಾರಸ್ವಾಮಿ ಸರ್ಕಾರದ ಅಂಗಳಕ್ಕೆ ಮೋದಿ ಸರ್ಕಾರ ಅಂಗಳಕ್ಕೆ ಚೆಂಡು ಎಸೆದಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಧರ್ಮ ಗುರುಗಳು ಮತ್ತು ಸ್ವಾಮಿಗಳ ನಿರ್ಧಾರಕ್ಕೆ ತಲೆ ಬಾಗುತ್ತೇವೆ ಎಂದು ಸ್ಥಿರತೆ ಕಾಯ್ದುಕೊಂಡಿದ್ದರು. ಆದರೆ ಕಾಂಗ್ರೆಸ್ ಹೆಚ್ಚಿನ ಉತ್ಸಾಹ ತೋರಿಸಿದ್ದು, ಕೇಂದ್ರಕ್ಕೆ ಶಿಫಾರಸು ಮಾಡಿತ್ತು.
ಚುನಾವಣೆ ಮುಗಿದ ಬಳಿಕ ಹೊಸ ಸರ್ಕಾರ ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸ್ಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಸದ್ಯಕ್ಕೆ ಈಗ ಸಮ್ಮಿಶ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.