ಬೆಂಗಳೂರು, ಮೇ 26-ಸಂಪುಟ ರಚನೆ ವಿಚಾರ, ವಿಧಾನಪರಿಷತ್ಗೆ ಅಭ್ಯರ್ಥಿಗಳ ಆಯ್ಕೆ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಸಲು ಇಂದು ಸಂಜೆ ದೆಹಲಿಗೆ ತೆರಳುತ್ತಿರುವುದಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಬಹುಮತ ಸಾಬೀತಾಗಿದ್ದು, ಸಂಪುಟ ವಿಸ್ತರಣೆ ಮಾಡಬೇಕಾಗಿದೆ. ನಮ್ಮ ಪಕ್ಷದ ಸಚಿವರ ಆಯ್ಕೆ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲು ದೆಹಲಿಗೆ ತೆರಳುತ್ತಿದ್ದೇವೆ. ಕುಮಾರಸ್ವಾಮಿಯವರು ದೆಹಲಿಗೆ ಬರುವುದಿಲ್ಲ. ಅವರು ಅವರ ಪಕ್ಷದಲ್ಲಿ ಯಾರು ಸಚಿವರಾಗಬೇಕೆಂಬುದನ್ನು ಪಟ್ಟಿ ಮಾಡುತ್ತಾರೆ. ಸಚಿವರ ಆಯ್ಕೆಯಲ್ಲಿ ಯಾವ ಮಾನದಂಡ ಅನುಸರಿಸಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಕೂಡ ದೆಹಲಿಯಲ್ಲಿ ಚರ್ಚೆಯಾಗಬಹುದು. ನಾನು ಎಂಟು ವರ್ಷ ಪಕ್ಷದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ನನಗಿಂತ ಉತ್ತಮರು ಪಕ್ಷದ ಅಧ್ಯಕ್ಷರಾಗಬೇಕು, ಪಕ್ಷ ಸಂಘಟನೆ ಮಾಡಬೇಕು ಎಂದು ಪರಮೇಶ್ವರ್ ಹೇಳಿದರು.
ಸರ್ಕಾರದಲ್ಲಿ ಸಕ್ರಿಯನಾಗಿರಬೇಕಾಗಿರುವುದರಿಂದ ನಾನೂ ಪಕ್ಷದ ಅಧ್ಯಕ್ಷನಾಗಿ ಮುಂದುವರೆಯುವುದಿಲ್ಲ. ಬೇರೆಯವರಿಗೂ ಅವಕಾಶ ಸಿಗಲಿ. ಪಕ್ಷದ ಸಂಘಟನೆ ಶಕ್ತಿಯುತವಾಗಿ ನಡೆಯಲಿ ಎಂದರು.
ನಾನು ಯಾವ ಖಾತೆಗೂ ಬೇಡಿಕೆಯಿಟ್ಟಿಲ್ಲ. ಯಾವ ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ. ನಾನು ಗೃಹ ಖಾತೆಯೇ ಬೇಕು ಎಂದು ಪಟ್ಟು ಹಿಡಿದಿಲ್ಲ. ಎಲ್ಲವೂ ಮಾಧ್ಯಮದ ಸೃಷ್ಟಿ ಅಷ್ಟೇ ಎಂದುಹೇಳಿದರು.
ರೈತರ ಸಾಲ ಮನ್ನಾ ವಿಚಾರ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರ ಬಂದ್ ಕರೆ ಸರ್ಕಾರಕ್ಕೆ ಎಚ್ಚರಿಕೆಯ ಘಂಟೆ. ಇದನ್ನು ನಾವು ಫೇಸ್ ಮಾಡುತ್ತೇವೆ ಎಂದು ಹೇಳಿದರು.
ಆರ್.ಆರ್.ನಗರ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಬೇಕಿತ್ತು. ಮಳೆ ಬಂದ ಕಾರಣ ಭಾಗವಹಿಸಲು ಸಾಧ್ಯವಾಗಲಿಲ್ಲ. ಇಂದು ಭಾಗವಹಿಸಿ ನಮ್ಮ ಅಭ್ಯರ್ಥಿ ಪ್ರಚಾರ ಮಾಡುತ್ತೇವೆ ಎಂದು ಹೇಳಿದರು.