ಬೆಂಗಳೂರು, ಮೇ 26-ವಿಶ್ವಾಸ ಮತ ಸಾಬೀತಾದ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಸಚಿವ ಸಂಪುಟ ವಿಸ್ತರಣೆ ಕಸರತ್ತು ತೀವ್ರಗೊಂಡಿದೆ. ಸಚಿವಾಕಾಂಕ್ಷಿಗಳು ಲಾಬಿಯನ್ನು ಮುಂದುವರೆಸಿದ್ದು, ಇಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಸಚಿವ ಸ್ಥಾನಕ್ಕಾಗಿ ಹಲವು ಶಾಸಕರು ಆಗ್ರಹಿಸಿದ್ದಾರೆ.
ಪರಮೇಶ್ವರ್, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರಿಗೆ ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚಿಸಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ದೆಹಲಿಗೆ ತೆರಳಲಿರುವ ನಾಯಕರು ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಮೈತ್ರಿಯಲ್ಲಿ ಯಾವುದೇ ಭಿನ್ನಮತ ಬಾರದಂತೆ ಯಾವ ರೀತಿ ಆಡಳಿತ ನಡೆಸಬೇಕು, ಮುಂಬರುವ 2019ರ ಲೋಕಸಭೆ ಚುನಾವಣೆಗೆ ಯಾವ ರೀತಿ ಸಿದ್ಧತೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಮುಖಂಡರ ಜೊತೆ ಚರ್ಚೆ ನಡೆಯಲಿದೆ.
ಉಪಮುಖ್ಯಮಂತ್ರಿ ಪರಮೇಶ್ವರ್ ಹುದ್ದೆ ಸೇರಿದಂತೆ ಕಾಂಗ್ರೆಸ್ಗೆ 24 ಸಚಿವ ಸ್ಥಾನ ಮೈತ್ರಿ ಸರ್ಕಾರದಲ್ಲಿ ದೊರೆಯಲಿದ್ದು, ಯಾರ್ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬುದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಪಕ್ಷ ನಿಷ್ಠೆ, ಹಿರಿತನ, ಪ್ರಾದೇಶಿಕತೆ ಹಾಗೂ ಜಾತಿ ಆಧಾರದ ಮೇಲೆ ಸಚಿವ ಸ್ಥಾನಗಳನ್ನು ನೀಡಲು ನಿರ್ಧರಿಸಲಾಗಿದೆ.
ಮೈತ್ರಿ ಸರ್ಕಾರವಿರುವುದರಿಂದ ಬಹುತೇಕರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. 78 ಶಾಸಕರಲ್ಲಿ 24 ಶಾಸಕರಿಗೆ ಸಚಿವ ಸ್ಥಾನದ ಪಟ್ಟ ಸಿಗುತ್ತದೆ. ಈಗಾಗಲೇ ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಅವರು ಆಯ್ಕೆಯಾಗಿದ್ದು, ಅವರಿಗೆ ಒಂದು ಸ್ಥಾನ, ಉಳಿದಂತೆ 23 ಸ್ಥಾನಗಳಲ್ಲಿ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ರಾಮಲಿಂಗಾರೆಡ್ಡಿ, ಎಚ್.ಎಂ.ರೇವಣ್ಣ, ಎಂ.ಆರ್.ಸೀತಾರಾಮ್, ಶ್ಯಾಮನೂರು ಶಿವಶಂಕರಪ್ಪ, ಕೆ.ಜೆ.ಜಾರ್ಜ್, ರೋಷನ್ಬೇಗ್, ದಿನೇಶ್ಗುಂಡೂರಾವ್, ನರೇಂದ್ರ, ಸತೀಶ್ ಜಾರಕಿಹೊಳಿ, ರೂಪಾಶಶಿಧರ್, ಲಕ್ಷ್ಮಿಹೆಬ್ಬಾಳ್ಕರ್, ಶಿವಾನಂದ್ಪಾಟೀಲ್, ರಾಜಶೇಖರ್ ಪಾಟೀಲ್, ರಹೀಮ್ಖಾನ್, ಪ್ರಿಯಾಂಕ್ ಖರ್ಗೆ, ಎಂ.ಟಿ.ಬಿ.ನಾಗರಾಜ್, ಸಿ.ಎಸ್.ಶಿವಳ್ಳಿ, ಟಿ.ರಘುಮೂರ್ತಿ, ಯು.ಟಿ.ಖಾದರ್, ಎಂ.ಬಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ.
ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಸಚಿವಾಕಾಂಕ್ಷಿಗಳು ದೆಹಲಿಗೆ ಶಿಫ್ಟ್ ಆಗಿದ್ದು, ಇಂದು ಸಂಜೆ ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲವೂ ತೀರ್ಮಾನವಾದರೆ ಮೈತ್ರಿ ಸರ್ಕಾರದ ನೂತನ ಸಚಿವ ಪ್ರಮಾಣ ವಚನ ಕಾರ್ಯಕ್ರಮ ಸದ್ಯದಲ್ಲೇ ನಡೆಯಲಿದೆ.