ವಾಷಿಂಗ್ಟನ್ :ಮೇ-25: ವಿಶ್ವಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಜತೆಗೆ ಜೂನ್ 12ರಂದು ಸಿಂಗಪುರದಲ್ಲಿ ನಿಗದಿಯಾಗಿದ್ದ ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರದ್ದುಪಡಿಸಿದ್ದಾರೆ.
ಅಣ್ವಸ್ತ್ರ ನಿಶ್ಯಸ್ತ್ರೀಕರಣಗೊಳಿಸುವ ನಿಟ್ಟಿನಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಜತೆಗೆ ಈ ಶೃಂಗಸಭೆ ಮಹತ್ವದ್ದಾಗಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಭೆ ರದ್ದುಪಡಿಸಿರುವುದಾಗಿ ಗುರುವಾರ ತಿಳಿಸಿದ್ದಾರೆ.
ಇಂಥ ತೀರ್ಮಾನಕ್ಕೆ ಬರಲು ಉತ್ತರ ಕೊರಿಯಾದ ದ್ವೇಷ ಮತ್ತು ಕೋಪದ ವರ್ತನೆಯೇ ಕಾರಣ ಎಂದು ಟ್ರಂಪ್ ಅಸಮಾಧಾನ ಹೊರಹಾಕಿದ್ದಾರೆ.
ಅಣ್ವಸ್ತ್ರ ಪರೀಕ್ಷಾ ಕೇಂದ್ರಗಳನ್ನು ನಾಶಗೊಳಿಸಲು ತೀರ್ಮಾನ ತೆಗೆದುಕೊಂಡಿರುವುದಾಗಿ ಉತ್ತರ ಕೊರಿಯಾ ಹೇಳಿದ ಒಂದು ಗಂಟೆಯ ನಂತರ ಟ್ರಂಪ್ ಈ ತೀರ್ಮಾನ ಪ್ರಕಟಿಸಿದ್ದಾರೆ.
‘ನಿಮ್ಮೊಂದಿಗೆ ಆ ಕ್ಷಣದಲ್ಲಿ ಇರಲು ನಾನು ಬಹಳ ಉತ್ಸುಕನಾಗಿದ್ದೆ. ದುಃಖಕರವೆಂದರೆ, ನಿಮ್ಮ ಇತ್ತೀಚಿನ ಹೇಳಿಕೆಯಲ್ಲಿ ಕಾಣಿಸಿದ ವಿಪರೀತ ಕೋಪ ಮತ್ತು ದ್ವೇಷದ ಮನಸ್ಥಿತಿಯ ಪ್ರದರ್ಶನದಿಂದಾಗಿ ಈ ಯೋಜಿತ ಸಭೆಯನ್ನು ಸೇರುವುದಕ್ಕೆ ಇದು ಸೂಕ್ತ ಸಮಯವಲ್ಲವೆಂದು ನಾನು ಭಾವಿಸುತ್ತೇನೆ’ ಎಂದು ಟ್ರಂಪ್ ಕಿಮ್ಗೆ ಬರೆದಿರುವ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
‘ಸಿಂಗಪುರ ಶೃಂಗಸಭೆ ಎರಡೂ ರಾಷ್ಟ್ರಗಳಿಗೂ ಒಳಿತಾಗುತ್ತಿತ್ತು. ಸಭೆ ಸೇರದಿರುವುದಕ್ಕೆ ಈ ಪತ್ರ ಬರೆಯುತ್ತಿದ್ದೇನೆ. ಸಭೆ ನಡೆಯದಿರುವುದು ಪ್ರಪಂಚದ ವಿನಾಶಕ್ಕೆ ಕಾರಣವಾಗುವುದಿಲ್ಲ’ ಎಂದು ಟ್ರಂಪ್ ಪತ್ರದಲ್ಲಿ ಹೇಳಿದ್ದಾರೆ.
‘ನೀವು ನಿಮ್ಮ ಪರಮಾಣು ಸಾಮರ್ಥ್ಯದ ಬಗ್ಗೆ ಮಾತನಾಡುತ್ತೀರಿ. ಆದರೆ, ನಾವು ಎಷ್ಟೊಂದು ಶಕ್ತಿಶಾಲಿ ಅಣ್ವಸ್ತ್ರ ಹೊಂದಿದ್ದೇವೆ ಎಂದರೆ ಆ ದೇವರನ್ನು ಪ್ರಾರ್ಥನೆ ಮಾಡುತ್ತೇನೆ, ಅವುಗಳನ್ನು ಬಳಸುವಂತೆ ಎಂದಿಗೂ ನಮಗೆ ಆಸ್ಪದ ಕೊಡಬೇಡ’ ಎಂದು ಟ್ರಂಪ್ ಉತ್ತರ ಕೊರಿಯಾದ ನಾಯಕನಿಗೆ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.
‘ಪರಿಶೀಲನೆಗೆ ಒಳಪಡುವ ಮತ್ತು ಸಂಪೂರ್ಣ ಅಣ್ವಸ್ತ್ರ ನಿಶ್ಯಸ್ತ್ರೀಕರಣಗೊಂಡಿರುವುದನ್ನು ನಾವು ಬಯಸುತ್ತದೆ. ಆದರೆ, ಉತ್ತರ ಕೊರಿಯಾ ತನ್ನ ಆಕ್ರಮಣಕಾರಿ ಮನಸ್ಥಿತಿ ಬಿಡದೆ, ಅದು ಎಂದಿಗೂ ಸುರಕ್ಷಿತವಾಗಿರುವುದಿಲ್ಲ’ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
‘ನಿಮ್ಮ ಮತ್ತು ನನ್ನ ನಡುವೆ ಅದ್ಭುತ ಸಂಭಾಷಣೆಗೆ ಈ ಶೃಂಗಸಭೆ ನಾಂದಿಯಾಗುತ್ತದೆ. ಎರಡೂ ರಾಷ್ಟ್ರಗಳ ನಡುವೆ ಬಾಂಧವ್ಯ ಬೆಸೆಯುತ್ತದೆ ಎಂದೇ ಭಾವಿಸಿದ್ದೆ. ಈಗಿನ ಬೆಳವಣಿಗೆ ಪತ್ರ ಸಂಭಾಷಣೆಗೆ ಸೀಮಿತಗೊಳಿಸಿದೆ. ಆದರೆ, ಮುಂದೆ ನಿಮ್ಮನ್ನು ಭೇಟಿಯಾಗಲು ನಾನು ಉತ್ಸುಕನಾಗಿರುತ್ತೇನೆ’ ಎಂದು ಪತ್ರದ ಮೂಲಕ ತಿಳಿಸಿರುವ ಅವರು, ಕಿಮ್ ಜತೆಗೆ ಮಾತುಕತೆಗೆ ಬಾಗಿಲು ಸದಾ ತೆರೆದಿರುತ್ತದೆ ಎಂದು ಹೇಳಿದ್ದಾರೆ.