ಬೆಂಗಳೂರು,ಮೇ 24
ಅವಿರೋಧವಾಗಿ ಸ್ಪೀಕರ್ ಆಯ್ಕೆ ಮಾಡಬೇಕು ಎನ್ನುವ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಕನಸಿಗೆ ಬಿಜೆಪಿ ತಣ್ಣೀರೆರಚಿದ್ದು, ವಿಧಾನಸಭೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಸುರೇಶ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ವಿಧಾನಸೌಧಕ್ಕೆ ಆಗಮಿಸಿದ ಸುರೇಶ್ ಕುಮಾರ್ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರನ್ನು ಭೇಟಿಯಾಗಿ ಸ್ಪೀಕರ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಮಲ್ಲೇಶ್ವರಂ ಶಾಸಕ ಅಶ್ವತ್ಥನಾರಾಯಣ್ ನಾಮಪತ್ರಕ್ಕೆ ಅನುಮೋದಕರಾಗಿ ಸಹಿ ಹಾಕಿದರೆ, ಶಾಸಕ ಸುನೀಲ್ ಕುಮಾರ್ ಸೂಚಕರಾಗಿ ಸಹಿ ಹಾಕಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಸುರೇಶ್ ಕುಮಾರ್, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ ನಾಮಪತ್ರ ಸಲ್ಲಿಸಿದ್ದೇನೆ. ನಾಳೆ ಚುನಾವಣೆ ಇದೆ. ಏನಾಗುತ್ತೋ ನೋಡೋಣ. ನಮಗೆ ಸಂಖ್ಯಾಬಲ ಇದೆ, ಕಾದು ನೋಡಿ ಎಂದರು.