ಮಲೆನಾಡಿಗೂ ಕಾಲಿಟ್ಟಿತೇ ಮಾರಣಾಂತಿಕ ನಿಪಾ ಸೋಂಕು?

ಶಿವಮೊಗ್ಗ, ಮೇ 24

ಕೇರಳದಲ್ಲಿ ಹಲವರನ್ನು ಬಲಿ ಪಡೆದಿದ್ದ ನಿಪಾ ಸೋಂಕು ಸದ್ಯ ಕರಾವಳಿಯಿಂದ ಮಲೆನಾಡಿಗೂ ಹರಡಿರುವ ಶಂಕೆ ವ್ಯಕ್ತವಾಗಿದ್ದು, ನಿಪಾ ಸೋಕು ಶಂಕಿತ ವ್ಯಕ್ತಿಗೆ ಜಿಲ್ಲೆಯ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯುವಕ ಮಿಥುನ್ ಗೆ ಸೋಂಕು ಹರಡಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಮೂಲತಃ ಸಾಗರದ ಮಿಥುನ್ ಕೇರಳದ ಕಾಸರಗೋಡಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೇರಳದಲ್ಲಿ ನಿಪಾ ಸೋಂಕು ಹರಡಿದ ಹಿನ್ನೆಲೆಯಲ್ಲಿ ಸಾಗರಕ್ಕೆ ಮರಳಿದ್ದರು. ಈ ವೇಳೆ ಅವರಿಗೆ ಜ್ವರ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೊದಲು ಮಿಥುನ್ ಸಾಗರ ತಾಲೂಕಿನ ಶಿರವಂತೆ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು. ಈಗ ಸಾಗರ ಸರ್ಕಾರಿ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಿಥುನ್ ರಕ್ತ ಮಾದರಿ ಸಂಗ್ರಹಿಸಿ ಪುಣೆ ಆಸ್ಪತ್ರೆಗೆ ಕಳಿಸಲಾಗಿದೆ

ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ಶಿವಮೊಗ್ಗ ಡಿಎಚ್‍ಓ ಡಾ ವೆಂಕಟೇಶ್, ಮಿಥುನ್ ಅವರ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಚೇತರಿಕೆ ಕಾಣಿಸುತ್ತಿದೆ. ರಕ್ತದ ಪರೀಕ್ಷೆ ವರದಿ ಬಂದ ಬಳಿಕ ಈ ಕುರಿತು ಖಚಿತ ಮಾಡಲಾಗುತ್ತದೆ. ನಿಪಾ ಕುರಿತ ಜಾಗೃತಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ