ಮಕ್ಕಳ ಕಳ್ಳನೆಂದು ಭಾವಿಸಿ ಯುವಕನನ್ನು ಹೊಡೆದು ಕೊಂದ ಪ್ರಕರಣ: 7 ಆರೋಪಿಅಗಳ ಬಂಧನ

ಬೆಂಗಳೂರು: ಮೇ-24: ಮಕ್ಕಳ ಕಳ್ಳ ಎಂದು ಭಾವಿಸಿ ಯುವಕನನ್ನು ಹೊಡೆದು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.

ಕಾಟನ್‌ಪೇಟೆ ಪೆನ್ಷೆನ್‌ ಮೊಹಲ್ಲಾ ರಂಗನಾಥ ಟಾಕೀಸ್‌ ಬಳಿ ಮಧ್ಯಾಹ್ನ ಸಾರ್ವಜನಿಕರು ಸೇರಿ ರಾಜಸ್ಥಾನ ಮೂಲದ ಕಾಲುರಾಮ್‌ (26) ಎಂಬಾತನನ್ನು ಮಕ್ಕಳ ಕಳ್ಳ ಎಂದು ಶಂಕಿಸಿ ಕೊಂದು ಹಾಕಿದ್ದಾರೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಾಲುರಾಮ್‌ ಪೆನ್ಷನ್‌ ಮೊಹಲ್ಲಾದಲ್ಲಿ ಓಡಾಡುತ್ತಿದ್ದ. ಆತನ ಚಲನವಲನಗಳ ಬಗ್ಗೆ ಅನುಮಾನಗೊಂಡ ಸಾರ್ವಜನಿಕರು ಹಿಡಿದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗುಂಪಿನಲ್ಲಿದ್ದ ಕೆಲವರು ಆತ ಮಕ್ಕಳ ಕಳ್ಳ ಇರಬಹುದು ಎಂದು ಮಾತನಾಡಿಕೊಂಡಿದ್ದಾರೆ. ವಿಷಯ ಒಬ್ಬರಿಂದ ಒಬ್ಬರಿಗೆ ಹರಡಿ ನೂರಾರು ಜನ ಸ್ಥಳದಲ್ಲೇ ಸೇರಿದ್ದಾರೆ. ಮಾತನಾಡಿಸುವ ನೆಪದಲ್ಲಿ ಒಬ್ಬರ ನಂತರ ಒಬ್ಬರು ಬ್ಯಾಟ್‌, ಮರದ ದೊಣ್ಣೆ ಹಾಗೂ ಕೈಗಳಿಂದ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೆಳಗೆ ಬಿದ್ದ ಆತನಿಗೆ ಒದ್ದಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಆತ ತಾನು ಮಕ್ಕಳ ಕಳ್ಳ ಅಲ್ಲ ಎಂದರೂ ಆತನ ಮಾತು ನಂಬದ ಜನ ಮಾನವೀಯತೆಯನ್ನೇ ಮರೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆತನ ಕೈಕಾಲು ಕಟ್ಟಿ ರಸ್ತೆಯಲ್ಲೇ ಎಳೆದಾಡಿದ್ದಾರೆ. ಅಲ್ಲಗೆ ಆತನನ್ನು ಸುತ್ತುವರಿದು ಕಾಲುಗಳಿಂದ ಒದ್ದಿದ್ದಾರೆ. ‘ಮಕ್ಕಳ ಕಳ್ಳ. ಮಕ್ಕಳ ಕಳ್ಳ’ ಎಂದು ಕೂಗಾಡುತ್ತ ಮರದ ದೊಣ್ಣೆ ಹಾಗೂ ಬ್ಯಾಟ್‌ಗಳಿಂದ ಹಲ್ಲೆ ಮಾಡಿದ್ದಾರೆ. ರಕ್ತ ಬರುವವರೆಗೂ ಥಳಿಸಿದ್ದಾರೆ. ಕೈ– ಕಾಲು ಮುಗಿದರೂ ಆತನ್ನು ಬಿಟ್ಟಿರಲಿಲ್ಲ.

ಘಟನೆಯನ್ನು ಕಂಡ ವ್ಯಕ್ತಿಯೊಬ್ಬರು, ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದರು. ಹೊಯ್ಸಳ ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋದಾಗಲೂ ನಿವಾಸಿಗಳು ಗುಂಪು ಕಟ್ಟಿಕೊಂಡು ಥಳಿಸುತ್ತಿದ್ದರು. ಪೊಲೀಸ್ ಸಿಬ್ಬಂದಿಯನ್ನು ಕಂಡ ಬಳಿಕ ಅಲ್ಲಿದ್ದವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ರಕ್ತದ ಮಡುವಿನಲ್ಲಿ ರಸ್ತೆಯಲ್ಲೇ ನರಳುತ್ತ ಬಿದ್ದಿದ್ದ ಕಾಲುರಾಮ್‌ ಅವರನ್ನು ಸಿಬ್ಬಂದಿಯೇ ಹೊಯ್ಸಳ ವಾಹನದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮಾರ್ಗಮಧ್ಯೆಯೇ ಆತ ಮೃತಪಟ್ಟಿದ್ದಾನೆ.

ಇದೀಗ ಆತನ ಮೇಲೆ ಹಲ್ಲೆ ಮಾಡಿದ ಸಾರ್ವಜನಿಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಪೊಲೀಸರು, 7 ಜನರನ್ನು ಬಂಧಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ