ಚೆನ್ನೈ:ಮೇ-24: ತೂತುಕುಡಿಯ ಅಣ್ಣಾನಗರದಲ್ಲಿ ಸ್ಟೆರ್ಲೈಟ್ ಕಂಪನಿಯ ವಿರುದ್ಧ ನಡೆಸಲಾದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ ಆತ್ಮರಕ್ಷಣೆಗಾಗಿಯೇ ಹೊರತು, ಪೂರ್ವನಿಯೋಜಿತವಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ್ದಾರೆ.
ಗೋಲಿಬಾರ್ ಕುರಿತಂತೆ ದೇಶದಾದ್ಯಂತ ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪಳನಿಸ್ವಾಮಿಯವರು, ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ದಾಳಿ ನಡೆಸಿದಾಗ, ಆತ್ಮರಕ್ಷಣೆಗಾಗಿ ಹೋರಾಡುವುದು ಸಾಮಾನ್ಯ. ಪೊಲೀಸರೂ ಕೂಡ ಅದನ್ನೇ ಮಾಡಿದ್ದಾರೆ. ತಮ್ಮ ಆತ್ಮರಕ್ಷಣೆಗಾಗಿ ಪೊಲೀಸರು ಗೋಲಿಬಾರ್ ನಡೆಸಿದ್ದಾರೆಯೇ ವಿನಃ ಪೂರ್ವ ನಿಯೋಜಿತವಾಗಿ ಗುಂಡಿನ ದಾಳಿ ನಡೆಸಿಲ್ಲ ಎಂದು ಹೇಳಿದ್ದಾರೆ.
ಕೆಲ ರಾಜಕೀಯ ಪಕ್ಷಗಳು, ಎನ್’ಡಿಒಗಳು ಹಾಗೂ ಸಮಾಜಘಾತುಕ ಶಕ್ತಿಗಳಿಂದಾಗಿ ರಾಜ್ಯದಲ್ಲಿ ಹಿಂಸಾತ್ಮಕ ಪರಿಸ್ಥಿತಿ ಎದುರಾಗಿದೆ. ಸಮಾಜಘಾತುಕ ಶಕ್ತಿಗಳು ಪ್ರತಿಭಟನಾಕಾರರನ್ನು ತಪ್ಪು ದಾರಿಗೆಳೆಯುತ್ತಿವೆ ಎಂದು ತಿಳಿಸಿದ್ದಾರೆ.
ತೂತುಕುಡಿಯಲ್ಲಿ ಸ್ಚೆರ್ಲೈಟ್ ಕಾಪರ್ ಕಂಪನಿಯ ವಿಸ್ತರಣೆಯನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಗೋಲಿಬಾರ್ ನಡೆಸಿದ ಪೊಲೀಸರು ಎಷ್ಟು ಅಮಾನುಷವಾಗಿ ನಡೆದುಕೊಂಡಿದ್ದರು ಎಂಬುದಕ್ಕೆ ಲಭಿಸಿದ್ದ ಕೆಲ ಸಾಕ್ಷ್ಯಾಧಾರಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿವೆ. ಪ್ರತಿಭಟನಾಕಾರರ ಸಮೀಪ ಆಗಮಿಸುವ ಪೊಲೀಸ್, ವಾಹನವೊಂದರ ಮೇಲೆ ಇರುವ ಒಬ್ಬ ಸ್ನಿಪರ್ ಪೊಲೀಸ್ ಸಿಬ್ಬಂದಿಯು ವಾಹನದ ಮೇಲೆ ಇರುವ ಇನ್ನೊಬ್ಬ ಸಿಬ್ಬಂದಿಗೆ ರೈಫಲ್ ಹಸ್ತಾಂತರ ಮಾಡುತ್ತಾನೆ. ರೈಫಲ್ ಪಡೆದುಕೊಂಡ ಪೊಲೀಸ್ ನಿಧಾನಗತಿಯಲ್ಲಿ ವಾಹನದ ಮೇಲೆ ತೆವಳುತ್ತಾ ಪೊಸಿಶನ್ ತೆಗೆದುಕೊಳ್ಳುತ್ತಾನೆ. ಆಗ ಆತನ ಹಿಂದೆ ಇರುವ ಪೊಲೀಸ್ ಒಬ್ಬ ಗುಂಡು ಹಾರಿಸು. ಕನಿಷ್ಠ ಒಬ್ಬನಾದರೂ ಸಾಯಬೇಕೆಂದು ಹೇಳುತ್ತಾನೆ. ಈ ಕುರಿತ ವಿಡಿಯೋ ಸುದ್ದಿ ಸಂಸ್ಥೆಯೊಂದಕ್ಕೆ ಸಿಕ್ಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗತೊಡಗಿವೆ.
ಅಣ್ಣಾ ನಗರದಲ್ಲಿ 144ನೇ ವಿಧಿಯನ್ವಯ ನಿಷೇಧಾಜ್ಞೆ ವಿಧಿಸಿದ್ದರೂ ಪ್ರತಿಭಟನಾಕಾರರು ಪೊಲೀಸರ ನಡುವೆ ಘರ್ಷಣೆ ಮುಂದುವರೆದಿವೆ. ಇಂದೂ ಕೂಡ ಡಿಎಂಕೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಡಿಎಂಕೆ ನಾಯಕ ಸ್ಟಾಲಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.