ಇಂದಿನ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಯಾಗುತ್ತಿರುವುದು ನನಗೆ ತೃಪ್ತಿ ತಂದಿಲ್ಲ – ಎಚ್.ಡಿ.ಕುಮಾರಸ್ವಾಮಿ

ಮೈಸೂರು,ಮೇ 23- ಇಂದಿನ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಯಾಗುತ್ತಿರುವುದು ನನಗೆ ತೃಪ್ತಿ ತಂದಿಲ್ಲ ಎಂದು ನಿಯೋಜಿತ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಲಲಿತ ಮಹಲ್ ಹೆಲಿಪ್ಯಾಡ್‍ನಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನಸಿನಲ್ಲಿ ನೋವು ತುಂಬಿಕೊಂಡೇ ಅಧಿಕಾರ ಸ್ವೀಕರಿಸುತ್ತಿದ್ದೇನೆ ಎಂದರು.
ಸ್ವತಂತ್ರವಾಗಿ ಜನರ ಪೂರ್ಣ ಬೆಂಬಲದಿಂದ ಅಧಿಕಾರಕ್ಕೆ ಬರಬೇಕೆಂಬುದು ನನ್ನ ಆಸೆ. ಆದರೆ ಈಗ ಹಾಗಾಗಲಿಲ್ಲ ಎಂದು ಮನದಾಳದ ಮಾತನ್ನು ತೋಡಿಕೊಂಡರು.
ನಾನು ಇಂದು ಸಂಜೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದೇನೆ. ನನ್ನೊಂದಿಗೆ ಕಾಂಗ್ರೆಸ್‍ನ ಡಾ.ಜಿ.ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನ ಮಾಡಲು ಸ್ವಲ್ಪ ಕಾಲಾವಕಾಶ ಬೇಕಿದೆ ಎಂದರು.
ರೈತರ ಸಾಲ ಮನ್ನಾ ವಿಷಯದಲ್ಲಿ ಯು ಟರ್ನ್, ರೈಟ್ ಟರ್ನ್ ಯಾವುದೂ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಬೆಳಗ್ಗೆ ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‍ನಲ್ಲಿ ಪತ್ನಿ ಅನಿತಾಕುಮಾರಸ್ವಾಮಿ ಅವರೊಂದಿಗೆ ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಇಳಿದು ನಂತರ ಕಾರ್‍ನಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಿಯ ಉತ್ಸವ ಮೂರ್ತಿಯ ಪ್ರಾಕಾರೋತ್ಸವವನ್ನು ನೆರವೇರಿಸಲಾಯಿತು.
ಈ ವೇಳೆ ಜೆಡಿಎಸ್ ಅಭಿಮಾನಿಗಳು ಕಾರ್ಯಕರ್ತರು ದಂಡೇ ನೆರೆದಿತ್ತು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುತ್ತಿರುವುದಕ್ಕೆ 1001 ತೆಂಗಿನಕಾಯಿಗಳನ್ನು ಒಡೆದು ಹರಕೆ ತೀರಿಸಿದರು.
ಚುನಾವಣೆ ಸಂದರ್ಭದಲ್ಲಿ ಕುಮಾರ ಪರ್ವ ಕಾರ್ಯಕ್ರಮಕ್ಕೆ ಚಾಮುಂಡಿ ಬೆಟ್ಟದಲ್ಲಿಯೇ ಚಾಲನೆ ನೀಡಲಾಗಿತ್ತು. ಈಗ ಸಿಎಂ ಆಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಅವರು ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ