ಮುಂಬೈ, ಮೇ 23-ವಾಣಿಜ್ಯ ನಗರ ಮುಂಬೈನ ಉದ್ಯಮಿ ಪ್ರಮೋದ್ ಗೋಯೆಂಕಾ ಅವರನ್ನು ಮೊಜಾಂಬಿಕ್ನಲ್ಲಿ ಅಪಹರಿಸಿ ಒತ್ತೆಯಾಳಾಗಿ ಇಟ್ಟುಕೊಂಡಿರುವ ಕೃತ್ಯದ ಹಿಂದೆ ಪಾಕಿಸ್ತಾನಿ ದುಷ್ಟರ ಕೈವಾಡ ಇದೆ ಎಂದು ವರದಿಯಾಗಿದೆ.
ಹಲವಾರು ರಿಯಲ್ ಎಸ್ಟೇಟ್ ಸಂಸ್ಥೆಗಳ ನಿರ್ದೇಶಕರಾಗಿರುವ ಗೋಯೆಂಕಾ ಅವರನ್ನು ಆಫ್ರಿಕಾ ರಾಷ್ಟ್ರ ಮೊಜಾಂಬಿಕ್ ರಾಜಧಾನಿ ಮಪುಟೋದಿಂದ ಕಳೆದ ಫೆಬ್ರವರಿಯಲ್ಲಿ ಅಪಹರಿಸಲಾಗಿದೆ. ಗುಜರಾತ್ ಉದ್ಯಮಿಯೊಬ್ಬರನ್ನು ಭೇಟಿಯಾಗಲು ಫೆ.17ರಂದು ತೆರಳಿದ್ದ ಅವರು ಏರ್ಪೆÇೀರ್ಟ್ನಿಂದ ಹೊರ ಬಂದ ಕೆಲವು ಗಂಟೆಗಳ ನಂತರ ನಾಪತ್ತೆಯಾಗಿದ್ದರು.
ಮರುದಿನ ಅವರ ಕೆಲವು ಸ್ನೇಹಿತರು ಮತ್ತು ರಾಜಕಾರಣಿಯೊಬ್ಬರಿಗೆ ಪ್ರಮೋದ್ ಮೊಬೈಲ್ನಿಂದ ವ್ಯಾಟ್ಸಾಪ್ ಸಂದೇಶ ಬಂದಿತು. ಅದರಲ್ಲಿ ಅವರು ಅರೆನಗ್ನ ಸ್ಥಿತಿಯಲ್ಲಿರುವ ದೃಶ್ಯಗಳಿದ್ದು, ಅಪಹರಣಕ್ಕೆ ಒಳಗಾಗಿರುವುದು ಸಾಬೀತಾಗಿತ್ತು. ಆದರೆ ಅಪಹರಣಕಾರರು ಯಾವುದೇ ಒತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ.
ಮುಂಬೈನಲ್ಲಿ ಬಹುಕೋಟಿ ರೂ.ಗಳ ಭೂ ವ್ಯವಹಾರ ಮಾತುಕತೆ ವಿಫಲವಾದ ನಂತರ ಪ್ರಮೋದ್ ಅವರನ್ನು ಅಪಹರಿಸಲಾಗಿದೆ. ಮೊಬಾಂಬಿಕ್ ಪಕ್ಕದ ದೇಶ ಸ್ವಾಜಿಲೆಂಡ್ನ ಪಾಕಿಸ್ತಾನಿ ಗ್ಯಾಂಗ್ ಲಂಡನ್ ಉದ್ಯಮಿಯೊಬ್ಬರ ಅಣತಿಯಂತೆ ಅವರನ್ನು ಅಪಹರಿಸಿ ಒತ್ತೆಯಾಗಿಟ್ಟುಕೊಂಡಿದೆ ಎಂದು ಭಾರತ ಮತ್ತು ಮೊಜಾಂಬಿಕ್ ಗುಪ್ತಚರ ಸಂಸ್ಥೆಗಳು ಹೇಳಿವೆ.
ಪ್ರಮೋದ್ ಗೋಯೆಂಕಾ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವ ಯತ್ನಗಳು ಮುಂದುವರಿದಿವೆ.