ಹೆಚ್ ಡಿ ಕುಮಾರಸ್ವಾಮಿ ಪ್ರಮಾಣ ವಚನಕ್ಕೆ ಕ್ಷಣಗಣನೆ: ಬೆಂಗಳೂರಿನಲ್ಲಿ ಧಾರಾಕಾರ ಮಳೆ; ಪದಗ್ರಹಣ ಸ್ಥಳದಲ್ಲಿ ಬದಲಾವಣೆ ಇಲ್ಲ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಸ್ಪಷ್ಟನೆ

ಬೆಂಗಳೂರು:ಮೇ-23: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದು ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪಮಾಣ ವಚನ ಸ್ವೀಕಾರಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆ ಆರಂಭವಾಗಿದೆ.

ಪದಗ್ರಹಣ ಸಮಾರಂಭಕ್ಕೆ ವಿಧಾನಸೌಧದ ಮೆಟ್ಟುಲುಗಳ ಮೇಲೆ ಸಿದ್ಧಪಡಿಸಲಾಗಿದ್ದ ಭರ್ಜರಿ ವೇದಿಕೆ ವರುಣನ ಅರ್ಭಟಕ್ಕೆ ತೊಯ್ದುಹೋಗಿದೆ. ಪ್ರಮಾಣವಚನ ಸಮಾರಂಭಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಅಭಿಮಾನಿಗಳು, ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಕುರ್ಚಿ, ಕಟೌಟ್, ಬ್ಯಾನರ್ ಗಳನ್ನೇ ಮಳೆಯಿಂದ ರಕ್ಷಿಸಿಕೊಳ್ಳಲು ಆಸರೆಯನ್ನಾಗಿ ಮಾಡಿಕೊಂಡು ತಿಂತಿದ್ದಾರೆ.

ನಗರದಾದ್ಯಂತ ಸುರಿದ ಧಾರಾಕಾರ ಮಳೆಯ ನಡುವೆಯೂ ಕುಮಾರಸ್ವಾಮಿ ಪದಗ್ರಹಣಕ್ಕೆ ಆಗಮಿಸಿರುವ ಜನರಲ್ಲಿನ ಉತ್ಸಾಹ ಕಡಿಮೆಯಾಗಿಲ್ಲ.ಕಾಂಗ್ರೆಸ್ ಮತ್ತು ಜೆಡಿಎಸ್‌ ಕಾರ್ಯಕರ್ತರು ಮಳೆಯಲ್ಲೇ ಕುಮಾರಸ್ವಾಮಿಗೆ ಜೈಕಾರ ಹಾಕುತ್ತಿದ್ದು, ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿದೆ.

ಇತ್ತೀಚಿನ ಮಾಹಿತಿ ಪ್ರಕಾರ ನಗರದಲ್ಲಿ ವರುಣನ ಅರ್ಭಟ ಸ್ವಲ್ಪ ಕಡಿಮೆಯಾಗಿದ್ದು, ಜನತೆ ನಿರಾಳರಾಗಿದ್ದಾರೆ.

ಇನ್ನು ಮಳೆ ಹೆಚ್ಚಿದ ಹಿನ್ನಲೆಯಲ್ಲಿ ಪದಗ್ರಹಣ ಸ್ಥಳವನ್ನು ವಿಧಾನಸೌಧ ಮುಂಭಾಗದಿಂದ ಬೇರೆಡೆ ಸ್ಥಳಾಂತರಿಸಲಾಗುತ್ತಿದೆ ಎಂಬ ವದಂತಿಗಳು ಕೇಳಿಬಂದಿದ್ದವು. ಆದರೆ ಇದನ್ನು ಅಲ್ಲಗಳೆದಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೂರ್ವ ನಿಯೋಜನೆಯಂತೆಯೇ ವಿಧಾನಸೌಧದ ಮುಂಭಾಗದಲ್ಲಿಯೇ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ