ನೂತನ ಸಿಎಂ ಪ್ರಮಾಣ ವಚನಕ್ಕೆ ವಿಧಾನಸೌಧ ಎದುರು ವೇದಿಕೆ ಸಜ್ಜು; ನಗರದಲ್ಲಿ ಪೊಲೀಸ್ ಭದ್ರತೆ; ಕೆಲ ರಸ್ತೆಗಳಲ್ಲಿ ಸಂಚಾರ ನಿಷೇಧ

ಬೆಂಗಳೂರು:ಮೇ-23: ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಸಮಾರಂಭಕ್ಕೆ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ವೇದಿಕೆ ಸಜ್ಜುಗೊಂಡಿದೆ. ಭದ್ರತೆಗಾಗಿ ವಿಧಾನಸೌಧದ ಸುತ್ತಮುತ್ತ ಎರಡೂವರೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಸಂಜೆ 4.30ಕ್ಕೆ ಸಮಾರಂಭ ನಡೆಯಲಿದ್ದು, ರಾಜ್ಯಾದ್ಯಂತದ ಒಂದು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಮಧ್ಯಾಹ್ನದ 3 ಗಂಟೆ ಬಳಿಕ ವಿಧಾನಸೌಧ ಮುಂಭಾಗದ ಅಂಬೇಡ್ಕರ್‌ ವೀದಿಗೆ ವಾಹನಗಳ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ. ಜಿಪಿಒ ಸರ್ಕಲ್‌ನಿಂದ ಕೆ.ಆರ್‌.ಸರ್ಕಲ್‌ವರೆಗೂ ಈ ರಸ್ತೆ ಬಂದ್‌ ಆಗಲಿದೆ. ಕೆಲ ರಸ್ತೆಗಳಲ್ಲಿ ಸಂಚಾರ ನಿಷೇಧ ಹೇರಿರುವುದರಿಂದ ಟ್ರಾಫಿಕ್ ಜಾಮ್ ಸಂಭವಿಸುವ ಸಾಧ್ಯತೆಯಿದೆ.

ಪ್ರಮಾಣ ವಚನ ಸಮಾರಂಭ ಹಿನ್ನಲೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಈ ಬಗ್ಗೆ ನಗರ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ನಗರದ ಎಲ್ಲೆಡೆ ಭದ್ರತೆ ಹೆಚ್ಚಿಸಲಾಗಿದೆ. ಎಂಟು ಡಿಸಿಪಿಗಳು, 50 ಎಸಿಪಿಗಳು, 100 ಜನ ಇನ್ಸ್‌ಪೆಕ್ಟರ್‌ ಸೇರಿದಂತೆ ಎರಡೂವರೆ ಸಾವಿರ ಪೊಲೀಸರು ವಿಧಾನಸೌಧದ ಸುತ್ತಲಿನ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. 35 ಕೆಎಸ್‌ಆರ್‌ಪಿ, 50 ಸಿಎಆರ್‌ ತಂಡವನ್ನೂ ವಿವಿಧೆಡೆ ನಿಯೋಜಿಸಲಾಗುತ್ತಿದೆ. ಜನ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು 3 ಸಾವಿರ ಟ್ರಾಫಿಕ್‌ ಪೊಲೀಸರನ್ನು ನಿಯೋಜಿಸಲಾಗಿದೆ,”ಎಂದು ತಿಳಿಸಿದ್ದಾರೆ.

ಪ್ರಮಾಣವಚನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಕಾಸ ಸೌಧ ಹಾಗೂ ವಿಧಾನ ಸೌಧದ ಆಸುಪಾಸಿನಲ್ಲಿರುವ ಎಲ್ಲ ಸರಕಾರಿ ಕಚೇರಿಗಳಿಗೆ ಮಧ್ಯಾಹ್ನದ ಬಳಿಕ ಅರ್ಧ ದಿನ ರಜೆ ಘೋಷಿಸಲಾಗಿದೆ.

ಸೇಂಟ್‌ ಜೋಸೆಫ್ಸ್‌ ಇಂಡಿಯನ್‌ ಹೈಸ್ಕೂಲ್‌ ಮೈದಾನ, ಮಲ್ಯ ಆಸ್ಪತ್ರೆ ರಸ್ತೆ, ಕಂಠೀರವ ಕ್ರೀಡಾಂಗಣ, ಯುಬಿ ಸಿಟಿ ಪೇ ಆ್ಯಂಡ್‌ ಪಾರ್ಕಿಂಗ್‌, ಸೆಂಟ್ರಲ್‌ ಕಾಲೇಜು ಮೈದಾನ, ಸ್ವಾತಂತ್ರ್ಯ ಉದ್ಯಾನ, ಸರಕಾರಿ ಕಲಾ ಕಾಲೇಜು, ಹಳೇ ಅಂಚೆ ಕಚೇರಿ ರಸ್ತೆ, ಟಿ.ಚೌಡಯ್ಯ ರಸ್ತೆಯಲ್ಲಿ ಎಲ್‌ಆರ್‌ಡಿಇ ಜಂಕ್ಷನ್‌ನಿಂದ ರಾಜಭವನ ಜಂಕ್ಷನ್‌ವರೆಗೆ ಕಾರು, ಬೈಕ್ ಗಳ ಪಾರ್ಕಿಂಗ್ ಮಾಡಬಹುದಾಗಿದೆ.

ಮಾಜಿ, ಹಾಲಿ ಸಂಸದರು, ಶಾಸಕರು, ಸಚಿವರು ಮತ್ತು ಅಧಿಕಾರಿಗಳ ವಾಹನಗಳನ್ನು ವಿಕಾಸಸೌಧದ ವಾಹನ ನಿಲುಗಡೆ ಸ್ಥಳದಲ್ಲಿ ಪಾರ್ಕಿಂಗ್‌ ಮಾಡಬಹುದು.

ಡಾ.ಬಿ.ಆರ್‌.ಅಂಬೇಡ್ಕರ್‌ ರಸ್ತೆ, ಬಾಳೇಕುಂದ್ರಿ ವೃತ್ತದಿಂದ ಕೆ.ಆರ್‌.ವೃತ್ತದವರೆಗೆ ರಸ್ತೆ, ರಾಜಭವನ ರಸ್ತೆ, ಚಾಲುಕ್ಯ ವೃತ್ತ, ಕ್ವೀನ್ಸ್‌ ರಸ್ತೆ, ತಿಮ್ಮಯ್ಯ ಜಂಕ್ಷನ್‌, ಶೇಷಾದ್ರಿ ರಸ್ತೆ, ಆನಂದರಾವ್‌ ವೃತ್ತ, ಮೈಸೂರು ಬ್ಯಾಂಕ್‌ ವೃತ್ತ ದೇವರಾಜ ಅರಸ್‌ ರಸ್ತೆ, ಎಂ.ಎಸ್‌.ಬಿಲ್ಡಿಂಗ್‌, ರೇಸ್‌ ಕೋರ್ಸ್‌ ರಸ್ತೆ, ಕಬ್ಬನ್‌ ಪಾರ್ಕ್‌ನ ಒಳಭಾಗದ ರಸ್ತೆಗಳು, ಮಿಲ್ಲರ್‌ ರಸ್ತೆ, ಬಸವೇಶ್ವರ ವೃತ್ತ, ಇನ್‌ಫೆಂಟ್ರಿ ರಸ್ತೆ, ಅಲಿ ಅಸ್ಗರ್‌ ರಸ್ತೆ, ಕೆ.ಜಿ. ರಸೆ ್ತ, ಪೊಲೀಸ್‌ ಕಾರ್ನರ್‌, ಹಳೇ ಅಂಚೆ ಕಚೇರಿ ರಸ್ತೆ, ಮೈಸೂರು ಬ್ಯಾಂಕ್‌ ವೃತ್ತದಿಂದ ಕೆ.ಆರ್‌. ವೃತ್ತದ ವರೆಗೆ, ಅನಿಲ್‌ ಕುಂಬ್ಳೆ ವೃತ್ತದಿಂದ ಬಿಆರ್‌ವಿ ಜಂಕ್ಷನ್‌ ವರೆಗೆ, ಟಿ.ಚೌಡಯ್ಯ ರಸ್ತೆ, ರಮಣ ಮಹರ್ಷಿ ರಸ್ತೆಗಳಲ್ಲಿ ಪಾರ್ಕಿಂಗ್‌ ನಿಷೇಧಿಸಲಾಗಿದೆ.

ಮಾರ್ಗ ಸೂಚನೆ ಮಾಹಿತಿ:

*ಮೈಸೂರು ರಸ್ತೆ ಮೂಲಕ ಬರುವ ವಾಹನಗಳು ಹಡ್ಸನ್‌ ವೃತ್ತ, ಕಸ್ತೂರ ಬಾ ರಸ್ತೆಯಲ್ಲಿ ಜನರನ್ನು ಇಳಿಸಿ ಅನಿಲ್‌ ಕುಂಬ್ಳೆ ವೃತ್ತ, ಮಣಿಪಾಲ್‌ ಸೆಂಟರ್‌, ಹಲಸೂರು ರಸ್ತೆ, ಗುರುದ್ವಾರ ಅಣ್ಣಾಸ್ವಾಮಿ ಮೊದಲಿಯಾರ್‌ ರಸ್ತೆ, ಹಜ್‌ ಕ್ಯಾಂಪ್‌ ಮೂಲಕ ಸಾಗಿ ನಂದಿದುರ್ಗ ರಸ್ತೆ ಜಯಮಹಲ್‌ ರಸ್ತೆ ಮೂಲಕ ಸಾಗಿ ಮಾವಿನಕಾಯಿ ಮಂಡಿ ಮೈದಾನ, ಸರ್ಕಸ್‌ ಮೈದಾನ ಹಾಗೂ ಅಮಾನುಲ್ಲಾ ಖಾನ್‌ ದ್ವಾರದ ಮೂಲಕ ಕೃಷ್ಣ ವಿಹಾರ್‌ ಆವರಣದಲ್ಲಿ ನಿಲುಗಡೆ ಮಾಡಬಹುದು.

*ಕನಕಪುರ ರಸ್ತೆ ಕಡೆಯಿಂದ ಬರುವವರು ಕನಕಪುರ ರಸ್ತೆ ಬನಶಂಕರಿ ದೇವಸ್ಥಾನ ಬಸ್‌ ನಿಲ್ದಾಣದ ಬಳಿ ಬಲ ತಿರುವು ಪಡೆದು ಲಾಲ್‌ಬಾಗ್‌ ಪಶ್ಚಿಮ ಗೇಟ್‌, ಹಡ್ಸನ್‌ ವೃತ್ತ ತಲುಪಿ ಕಸ್ತೂರಬಾ ರಸ್ತೆಯಲ್ಲಿ ಜನರನ್ನು ಇಳಿಸಿ ಕೃಷ್ಣ ವಿಹಾರ್‌ ಆವರಣ ತಲುಪಿ ವಾಹನ ಪಾರ್ಕಿಂಗ್‌ ಮಾಡಬೇಕು.

*ತುಮಕೂರು ರಸ್ತೆ ಕಡೆಯಿಂದ ಬರುವ ಬಸ್‌ಗಳು ಗೊರಗುಂಟೆಪಾಳ್ಯ ಜಂಕ್ಷನ್‌ ಬಳಿ ಎಡ ತಿರುವು ಪಡೆದು ಬಿ.ಇ.ಎಲ್‌ ವೃತ್ತ, ಹೆಬ್ಬಾಳ ಮೇಲು ಸೇತುವೆ, ಕಾವೇರಿ ಜಂಕ್ಷನ್‌ ಮೂಲಕ ಸಾಗಿ ವಿಂಡ್ಸರ್‌ ಮ್ಯಾನರ್‌ ಹಳೇ ಹೈಗ್ರೌಂಡ್ಸ್‌ ಪಿ.ಎಸ್‌. ಜಂಕ್ಷನ್‌ನ ಎಡ ಭಾಗದಲ್ಲಿ ಬಂದು ಜನರನ್ನು ಇಳಿಸಿ ಕಂಟೋನ್ಮೆಂಟ್‌ ಅಂಡರ್‌ ಪಾಸ್‌ ಜಯಮಹಲ್‌ ರಸ್ತೆ ಮೂಲಕ ಸಾಗಿ ಕೃಷ್ಣ ವಿಹಾರ್‌ ಆವರಣದಲ್ಲಿ ವಾಹನ ನಿಲುಗಡೆ ಮಾಡಬೇಕು.

* ಬಳ್ಳಾರಿ ರಸ್ತೆ, ದೊಡ್ಡಬಳ್ಳಾಪುರ ಕಡೆಯಿಂದ ಬರುವ ವಾಹಗಗಳು ವಿಂಡ್ಸರ್‌ ಮ್ಯಾನರ್‌, ಹಳೇ ಹೈಗ್ರೌಂಡ್ಸ್‌ ಪಿ.ಎಸ್‌. ಜಂಕ್ಷನ್‌ನಲ್ಲಿ ಜನರನ್ನು ಇಳಿಸಿ ಅರಮನೆ ಮೈದಾನ ಕೃಷ್ಣ ವಿಹಾರ್‌ ಆವರಣದಲ್ಲಿ ನಿಲುಗಡೆ ಮಾಡಬಹುದು.

*ಕೋಲಾರ, ಕೆ.ಜಿಎಫ್‌ ಕಡೆಯಿಂದ ಬರುವ ವಾಹನಗಳು ಹಳೇ ಮದ್ರಾಸ್‌ ರಸ್ತೆ, ನಾಗವಾರ ಹೆಬ್ಬಾಳ ಮೇಲು ಸೇತುವೆ ಮುಖಾಂತರ ಸಾಗಿ ಹಳೇ ಹೈಗ್ರೌಂಡ್ಸ್‌ ಪಿಎಸ್‌ ಜಂಕ್ಷನ್‌ನ ಎಡ ಭಾಗದಲ್ಲಿ ಬಂದು ಜನರನ್ನು ಇಳಿಸಿ ಕೃಷ್ಣ ವಿಹಾರ್‌ ಪಾರ್ಕಿಂಗ್‌ ಜಾಗಕ್ಕೆ ತೆರಳಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ