ಬೆಂಗಳೂರು:ಮೇ-23: ರಾಜ್ಯದಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಕೂಟ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಉಪ ಮುಖ್ಯಮಂತ್ರಿ (ಡಿಸಿಎಂ) ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ಸಂಜೆ 4.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ತಾಜ್ ವೆಸ್ಟೆಂಡ್ನಲ್ಲಿ ಮಂಗಳವಾರ ಸಂಜೆ ನಡೆದ ಎರಡು ಪಕ್ಷಗಳ ಹಿರಿಯ ನಾಯಕರ ಸಭೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಯಿತು.
ಪ್ರಮಾಣವಚನ ಸಮಾರಂಭಕ್ಕೆ ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಬಿಎಸ್ ಪಿ ಅಧ್ಯಕ್ಷೆ ಮಾಯಾವತಿ, ಎಸ್ ಪಿ ಅಧ್ಯಕ್ಷ ಅಖಿಲೇಶ್ ಯಾದವ್, ಆರ್ ಜೆಡಿ ನಾಯಕ ತೇಜಸ್ವಿ ಯಾದವ್, ಡಿಎಂ ಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಮೊದಲಾದವರು ಆಗಮಿಸುವ ನಿರೀಕ್ಷೆ ಇದೆ.
ಸದನದಲ್ಲಿ ಇದೇ 25ರಂದು ಕುಮಾರಸ್ವಾಮಿ ವಿಶ್ವಾಸ ಮತ ಸಾಬೀತುಪಡಿಸಲಿದ್ದಾರೆ. 28ರಂದು ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ.
‘ಸಭಾಧ್ಯಕ್ಷರ (ಸ್ಪೀಕರ್) ಸ್ಥಾನ ಕಾಂಗ್ರೆಸ್ ಪಾಲಾಗಲಿದ್ದು, ಕೆ.ಆರ್. ರಮೇಶ್ ಕುಮಾರ್ ಆ ಹುದ್ದೆ ಅಲಂಕರಿಸಲಿದ್ದಾರೆ. ಉಪ ಸಭಾಧ್ಯಕ್ಷ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದೇವೆ. ಸಂಪುಟದಲ್ಲಿ 20 ಸ್ಥಾನಗಳು ಕಾಂಗ್ರೆಸ್ಗೆ ಮತ್ತು 12 ಸ್ಥಾನಗಳು ಜೆಡಿಎಸ್ಗೆ ಸಿಗಲಿದೆ’ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.ಸದನದಲ್ಲಿ ವಿಶ್ವಾಸ ಮತ ಸಾಬೀತುಪಡಿಸಿದ ಬಳಿಕ ಸಮನ್ವಯ ಸಮಿತಿ ರಚನೆ ಆಗಲಿದೆ. ಲಿಂಗಾಯತರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
14 ವರ್ಷಗಳ ಬಳಿಕ ರಾಜ್ಯದಲ್ಲಿ ಮತ್ತೆ ‘ತೆನೆ ಹೊತ್ತ ಮಹಿಳೆ’ ಜೊತೆ ಕಾಂಗ್ರೆಸ್ ‘ಕೈ’ ಜೋಡಿಸುತ್ತಿದೆ. 2004ರಲ್ಲಿ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಆಗ ಜೆಡಿಎಸ್ನಲ್ಲಿದ್ದ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಗಾದಿ ಏರಿದ್ದರು.
ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸುವವರೆಗೆ ಕಾಂಗ್ರೆಸ್ ಶಾಸಕರು ಹಿಲ್ಟನ್ ರೆಸಾರ್ಟ್ನಲ್ಲಿ, ಜೆಡಿಎಸ್ ಶಾಸಕರು ದೇವನಹಳ್ಳಿ ಬಳಿಯ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಸಭೆಯಲ್ಲಿದ್ದಾಗಲೇ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕರೆ ಮಾಡಿ, ಶಾಸಕರ ಸಲಹೆಯನ್ನು ತಿಳಿಸಿದರು. ರಾಹುಲ್ ಸಹ ಈ ಅಭಿಪ್ರಾಯವನ್ನು ಒಪ್ಪಿ ಪರಮೇಶ್ವರ್ ಒಬ್ಬರು ಪ್ರಮಾಣ ವಚನ ಸ್ವೀಕರಿಸಲು ಹಸಿರು ನಿಶಾನೆ ತೋರಿದರೆಂದು ತಿಳಿದುಬಂದಿದೆ.
ಸಚಿವ ಸ್ಥಾನಕ್ಕೆ ಪೈಪೋಟಿ: ಕಾಂಗ್ರೆಸ್ಗೆ ಹಂಚಿಕೆಯಾದ ಸಚಿವ ಸ್ಥಾನಗಳಿಗೆ 40ಕ್ಕೂ ಹೆಚ್ಚು ಆಕಾಂಕ್ಷಿಗಳು ಪೈಪೋಟಿ ನಡೆಸಿದ್ದಾರೆ. ಜಾತಿ, ಧರ್ಮ, ಪ್ರದೇಶವಾರು ಹೆಸರಲ್ಲಿ ಮಂತ್ರಿ ಸ್ಥಾನಕ್ಕೆ ಪ್ರಯತ್ನ ನಡೆಸಿರುವುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.
ಪರಮೇಶ್ವರ ಅವರಿಗೆ ಡಿಸಿಎಂ ಸ್ಥಾನ ಗಟ್ಟಿಯಾಗಿದ್ದರೂ ಆರು ಮಂದಿ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಕೊನೆ ಹಂತದಲ್ಲಿ ಡಿ.ಕೆ. ಶಿವಕುಮಾರ್, ಎಂ.ಬಿ ಪಾಟೀಲ, ಶಾಮನೂರು ಶಿವಶಂಕರಪ್ಪ, ಎಸ್.ಆರ್. ಪಾಟೀಲ, ಸತೀಶ್ ಜಾರಕಿಹೊಳಿ, ಆರ್. ರೋಷನ್ ಬೇಗ್ ಹೆಸರು ಈ ಪಟ್ಟಿಗೆ ಸೇರ್ಪಡೆಯಾಗಿತ್ತು. ದಕ್ಷಿಣ ಭಾಗಕ್ಕೆ ಡಿಸಿಎಂ ಕೊಡುವುದಾದರೆ, ಉತ್ತರ ಕರ್ನಾಟಕ ಭಾಗಕ್ಕೂ ನೀಡಿ ಎಂಬ ಒತ್ತಾಯ ಬಲವಾಗುತ್ತಿದೆ.
ಮಹಿಳೆಯರ ಕೋಟಾದಲ್ಲಿ ಸಚಿವರಾಗಲು ತೆರೆಮರೆ ಕಸರತ್ತು ಆರಂಭವಾಗಿದೆ. ಈ ಪೈಕಿ ಲಕ್ಷ್ಮಿ ಹೆಬ್ಬಾಳ್ಕರ ಹೆಸರು ಮುಂಚೂಣಿಯಲ್ಲಿದೆ. ಇವರ ಹೊರತಾಗಿ ಅಂಜಲಿ ನಿಂಬಾಳ್ಕರ, ರೂಪಾ ಶಶಿಧರ್ ಹಾಗೂ ದಿವಂಗತ ಖಮರುಲ್ ಇಸ್ಲಾಂ ಪತ್ನಿ ಕತೀಜಾ ಫಾತಿಮಾ ನಡುವೆ ಪೈಪೋಟಿ ನಡೆದಿದೆ.
ರಾಜ್ಯದಲ್ಲೇ ಮೊದಲ ಬಾರಿಗೆ ದಲಿತ ಸಮುದಾಯಕ್ಕೆ ಸೇರಿದವರೊಬ್ಬರು ಉಪ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ.
2013ರಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರು ಉಪ ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದಿದ್ದರು. ಚುನಾವಣೆಯಲ್ಲಿ ಸೋತಿದ್ದರಿಂದ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಮೈತ್ರಿ ಸರ್ಕಾರದಲ್ಲಿ ಅವರಿಗೆ ಈ ಭಾಗ್ಯ ಸಿಕ್ಕಿದೆ.
ಮೈತ್ರಿ ಸರ್ಕಾರ– ಹಂಚಿಕೆ ಸೂತ್ರ
ಜೆಡಿಎಸ್– ಮುಖ್ಯಮಂತ್ರಿ ಸೇರಿ 12 ಸಚಿವ ಸ್ಥಾನ
ಕಾಂಗ್ರೆಸ್– ಉಪ ಮುಖ್ಯಮಂತ್ರಿ ಸೇರಿ 22 ಸಚಿವ ಸ್ಥಾನ
ಸ್ಪೀಕರ್– ಕಾಂಗ್ರೆಸ್
ಡೆಪ್ಯುಟಿ ಸ್ಪೀಕರ್– ಜೆಡಿಎಸ್