ನವದೆಹಲಿ, ಮೇ 22-ದೇಶದ ಪ್ರಮುಖ ಮಹಾನಗರಗಳಲ್ಲಿ ಒಂಭತ್ತನೇ ದಿನವಾದ ಇಂದೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಕೆಯಾಗಿದ್ದು, ಗ್ರಾಹಕರು ಹಿಡಿಶಾಪ ಹಾಕುತ್ತಿದ್ದಾರೆ.
ಇಂಧನ ದರ ಕಡಿಮೆ ಮಾಡಲು ಕೇಂದ್ರ ಸಾಕಷ್ಟು ಕಸರತ್ತು ನಡೆಸುತ್ತಿದೆ. ಈ ಮಧ್ಯೆ ದೆಹಲಿ, ಮುಂಬೈ, ಕೋಲ್ಕತಾ, ಮತ್ತು ಚೆನ್ನೈ ಮಹಾನಗರಗಳೂ ಸೇರಿದಂತೆ ಒಂಭತ್ತನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂಧನ ದರ ಏರಿಕೆಗೆ 19 ದಿನಗಳ ಕಾಲ ಬ್ರೇಕ್ ಹಾಕಿದ್ದ ಕೇಂದ್ರ ಸರ್ಕಾರ ನಂತರ ಹೆಚ್ಚಳ ಮಾಡಿತ್ತು. ಅದು ಏರುಗತಿಯಲ್ಲೇ ಮುಂದುವರಿದಿದೆ. ಇಂದು ಈ ನಾಲ್ಕು ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 29 ರಿಂದ 32 ಪೈಸೆಗಳಷ್ಟು ಹೆಚ್ಚಾಗಿದೆ. ಒಂಭತ್ತು ದಿನಗಳ ಅವಧಿಯಲ್ಲಿ ದೆಹಲಿಯಲ್ಲಿ ಲೀಟರ್ಗೆ 2.24 ರೂ. ಕೋಲ್ಕತಾದಲ್ಲಿ 2.21 ರೂ., ಮುಂಬೈನಲ್ಲಿ 2.22 ರೂ. ಹಾಗೂ ಚೆನ್ನೈನಲ್ಲಿ 2.36 ರೂ.ಗಳಷ್ಟು ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ತೈಲ ಬೆಲೆಗಳ ಹೆಚ್ಚಳದಿಂದಾಗಿ ಸರ್ಕಾರಿ ಸ್ವಾಮ್ಯದ ಆಯಿಲ್ ಕಂಪನಿಗಳು ಅದರ ಹೊರೆಯನ್ನು ಗ್ರಾಹಕರ ಮೇಲೆ ಹಾಕುತ್ತಿದೆ.
ಕಳೆದ ಒಂಭತ್ತು ದಿನಗಳಿಂದಲೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಗ್ರಾಹಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.