ಎಚ್ ಡಿ ಕೆ ಜೊತೆ ಜಿ ಪರಮೇಶ್ವರ್ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು ಮೇ22 – ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೊತೆಗೆ ಯಾರೆಲ್ಲಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

ಸಂಪುಟ ವಿಸ್ತರಣೆ ಸಂಬಂಧ ಮಂಗಳವಾರ ಸಂಜೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನಡೆಸಿದ ಸಭೆಯಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗಿದ್ದು, ಬುಧವಾರ ಕುಮಾರಸ್ವಾಮಿ ಜೊತೆಗೆ ಕಾಂಗ್ರೆಸ್ ನಿಂದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಹೊಸ ಮೈತ್ರಿ ಸರಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ.
ಸಭೆಯ ನಂತರ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, “ಸಂಪುಟ ವಿಸ್ತರಣೆ ಸಂಬಂಧ ಇಂದು ನಾವು ತೀರ್ಮಾನ ತೆಗೆದುಕೊಂಡಿದ್ದೇವೆ. ಮೇ 25ರಂದು ಸಭಾಧ್ಯಕ್ಷರು ಮತ್ತು ಉಪಸಭಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಬುಧವಾರ ಖಾತೆಗಳ ಹಂಚಿಕೆ ಬಗ್ಗೆ ನಿರ್ಧರಿಸುತ್ತೇವೆ. ಎಲ್ಲವೂ ಸರಿಯಾಗಿದೆ. ಯಾವುದೇ ಭಿನ್ನಾಭಿಪ್ರಾಯವಿಲ್ಲ,” ಎಂದಿದ್ದಾರೆ.

ಸಭೆಯಲ್ಲಿ ಜೆಡಿಎಸ್ ನಿಂದ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಮತ್ತು ಕಾಂಗ್ರೆಸ್ ನಿಂದ ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ್, ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಗೂ ಡಿ.ಕೆ. ಶಿವಕುಮಾರ್ ಪಾಲ್ಗೊಂಡಿದ್ದರು.
ಪರಮೇಶ್ವರ್ ಗೆ ಡಿ.ಸಿ.ಎಂ ಪಟ್ಟ
  
ಕಾಂಗ್ರೆಸ್‌‌-ಜೆಡಿಎಸ್‌‌ ಸಮ್ಮಿಶ್ರ ಸರ್ಕಾರದ ಸಂಪುಟದ ರಚನೆ ಕಸರತ್ತು ಭಾಗಶಃ ಪೂರ್ಣಗೊಂಡಿದೆ. ಕಾಂಗ್ರೆಸ್‌‌ನ ಜಿ. ಪರಮೇಶ್ವರ್‌ ಉಪ ಮುಖ್ಯಮಂತ್ರಿ ಹಾಗೂ ರಮೇಶ್‌‌ ಕುಮಾರ್‌ ಅವರನ್ನು ಸ್ಪೀಕರ್‌ ಆಗಿ ಆಯ್ಕೆ ಮಾಡಲಾಗಿದೆ. ಒಟ್ಟು 34 ಸಚಿವರನ್ನು ಸರ್ಕಾರ ಒಳಗೊಂಡಿರುತ್ತಿದೆ.

ಸರ್ಕಾರ ಒಟ್ಟು 34 ಸಚಿವ ಸ್ಥಾನಗಳನ್ನು ಒಳಗೊಂಡಿರುತ್ತಿದೆ. ಇದರಲ್ಲಿ ಕಾಂಗ್ರೆಸ್‌‌ಗೆ ಡಿಸಿಎಂ ಸೇರಿದಂತೆ 22 ಸ್ಥಾನಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಇತ್ತ, ಜೆಡಿಎಸ್‌ಗೆ ಮುಖ್ಯಮಂತ್ರಿ ಪಟ್ಟ ಸೇರಿದಂತೆ ಒಟ್ಟು 12 ಸಚಿವ ಸ್ಥಾನಗಳನ್ನು ಬಿಟ್ಟು ಕೊಡಲು ನಿರ್ಧಾರಕ್ಕೆ ಬರಲಾಗಿದೆ. 

ಡಾ.ಜಿ. ಪರಮೇಶ್ವರ್‌ ಉಪ ಮುಖ್ಯಮಂತ್ರಿ ಸ್ಥಾನವನ್ನು ಪಡೆದರೆ, ಮತ್ತೊಬ್ಬ ಕಾಂಗ್ರೆಸ್‌ ಮುಖಂಡ ರಮೇಶ್‌‌ ಕುಮಾರ್‌ ಸ್ಪೀಕರ್‌ ಆಗಿ ಆಯ್ಕೆ ಆಗಿದ್ದಾರೆ. ಇದನ್ನು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದು, ಬಹುಮತ ಸಾಬೀತುಪಡಿಸಿದ ಬಳಿಕ ಖಾತೆಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದಿದ್ದಾರೆ. 

ಸಮಾರಂಭದಲ್ಲಿ ಯಾರೆಲ್ಲ ಭಾಗಿ

ಕಾಂಗ್ರೆಸ್‌‌ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ,ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌, ದೆಹಲಿ ಸಿಎಂ ಅರವಿಂದ್‌‌ ಕೇಜ್ರಿವಾಲ್‌, ತೆಲಂಗಾಣ ಸಿಎಂ ಕೆಸಿಆರ್‌, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಉತ್ತರಪ್ರದೇಶ ಮಾಜಿ ಸಿಎಂ ಮಾಯಾವತಿ, ಜಮ್ಮು-ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ, ಸಿಪಿಎಂನ ಸೀತಾರಾಮ್‌ ಯಚೂರಿ, ಕೇರಳ ಸಿಎಂ ಪಿಣರಾಯಿ ವಿಜಯನ್‌, ಮಾಜಿ ಸಚಿವ ತೇಜಸ್ವಿ ಯಾದವ್‌ ಭಾಗಿಯಾಗಲಿದ್ದಾರೆ.

ಇದನ್ನು ಬಿಟ್ಟು ಕರ್ನಾಟಕದ ಜೆಡಿಎಸ್‌‌ ಹಾಗೂ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಸಂಚಾರ ನಿರ್ಬಂಧ
ಎಚ್​.ಡಿ. ಕುಮಾರಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರ ಮತ್ತು ಪಾರ್ಕಿಂಗ್​ ವ್ಯವಸ್ಥೆಯನ್ನು ಸಂಚಾರ ಪೊಲೀಸರು ಬದಲಾವಣೆ ಮಾಡಿದ್ದಾರೆ.

ವಿಧಾನಸೌಧ ಕಡೆ ಸಂಚಾರ ನಿಷೇಧ 
ಶಿವಾಜಿನಗರದಿಂದ ವಿಧಾನಸೌಧ ಕಡೆ ಬರುವ ವಾಹನಗಳು ಬಾಳೆಕುಂದ್ರಿ ಸರ್ಕಲ್​​ನಿಂದ ತಿಮ್ಮಯ್ಯ ರಸ್ತೆ ಮೂಲಕ ಬಂದು ಚಾಲುಕ್ಯ ಸರ್ಕಲ್​ಗೆ ಸಂಪರ್ಕ ಪಡೆಯಬೇಕು. ಮೈಸೂರು ರಸ್ತೆ ಮೂಲಕ ಬರುವವರು ಟೌನ್​​ಹಾಲ್, ಎನ್.ಆರ್.ಜಂಕ್ಷನ್​ನಲ್ಲಿ ಬಲ ತಿರುವು ಪಡೆದು ಹಡ್ಸನ್ ಸರ್ಕಲ್, ಕ್ವೀನ್ಸ್​ ಸರ್ಕಲ್, ಅನಿಲ್‌ ಕುಂಬ್ಳೆ ಸರ್ಕಲ್​​ನಿಂದ ಆರ್​ಬಿಐ ಜಂಕ್ಷನ್​​ಗೆ ಸಂಪರ್ಕಿಸಿ, ಕೃಷ್ಣ ವಿಹಾರಕ್ಕೆ ತೆರಳಬೇಕು.

ತುಮಕೂರು ಕಡೆಯಿಂದ ಬರುವವರು ಗೊರಗುಂಟೆಪಾಳ್ಯ ಬಳಿ ಎಡ ತಿರುವು‌ ಪಡೆದು ಬಿಇಎಲ್ ಸರ್ಕಲ್, ಹೆಬ್ಬಾಳ‌, ಮೇಕ್ರಿ ಸರ್ಕಲ್ ಮೂಲಕ ಪ್ಯಾಲೇಸ್ ಗ್ರೌಂಡ್​ಗೆ ಸಂಪರ್ಕ ಪಡೆಯಬೇಕು. ಕೋಲಾರ ಕಡೆಯಿಂದ ಬರುವವರು ರಾಮಮೂರ್ತಿನಗರ, ರಾಮಮೂರ್ತಿನಗರ ಮೂಲಕ ರಿಂಗ್ ರೋಡ್, ಹೆಬ್ಬಾಳ ಮಾರ್ಗವಾಗಿ ಅರಮನೆ ಮೈದಾನ ರಸ್ತೆಗೆ ಸೇರಬೇಕು.

ಪಾರ್ಕಿಂಗ್​ ವ್ಯವಸ್ಥೆ
ಸಮಾರಂಭಕ್ಕೆ ಆಗಮಿಸುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸೇಂಟ್​ ಜೋಸೆಫ್​ ಶಾಲೆ, ಕಂಠೀರವ ಸ್ಟೇಡಿಯಂ, ಯುಬಿ ಸಿಟಿ, ಸೆಂಟ್ರಲ್ ಕಾಲೇಜು ಮೈದಾನ, ಫ್ರೀಡಂಪಾರ್ಕ್, ಸರ್ಕಾರಿ ಕಲಾ ಕಾಲೇಜು, ಚೌಡಯ್ಯ ರಸ್ತೆಯಲ್ಲಿ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹಾಲಿ, ಮಾಜಿ ಶಾಸಕರು ಎಂಎಲ್​ಸಿಗಳಿಗೆ ದೇವರಾಜ ಅರಸು ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಇಲ್ಲಿ ಪಾರ್ಕಿಂಗ್​ ನಿಷೇಧ 
ಅಂಬೇಡ್ಕರ್ ರಸ್ತೆ, ರಾಜಭವನ‌ ರಸ್ತೆ, ಎಲ್​​ಎಚ್ ರಸ್ತೆ, ಚಾಲುಕ್ಯ ಸರ್ಕಲ್​​​ನಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ