ಅಬುಧಾಬಿ, ಮೇ 22-ಪವಿತ್ರ ರಂಜಾನ್ ಮಾಸದಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ) ರಾಜಧಾನಿ ಅಬುಧಾಬಿ ಝಾಯಿದ್ ಶೇಖ್ ಮಹಾ ಮಸೀದಿಯಲ್ಲಿ ಪ್ರತಿದಿನ 35,000ಕ್ಕೂ ಹೆಚ್ಚು ಮಂದಿಗೆ ಉಚಿತ ಇಫ್ತಾರ್ ಭೋಜನದ ವ್ಯವಸ್ಥೆ ಕಲ್ಪಿಸಿ ವಿಶ್ವದ ಗಮನಸೆಳೆದಿದೆ.
ರಂಜಾನ್ ಅವಧಿಯಲ್ಲಿ ಪ್ರತಿದಿನ ಉಪವಾಸದ ನಂತರ ಭಾರೀ ಸಂಖ್ಯೆ ಮುಸ್ಲಿಂ ಬಾಂಧವರಿಗೆ ಕುರಿ, ಕೋಳಿ ಖಾದ್ಯದೊಂದಿಗೆ ಸೇಬು, ಖರ್ಜೂರ, ಲಬನ್ ಪಾನೀಯ, ಹಣ್ಣಿನ ರಸ ಮತ್ತು ನೀರಿನ ಬಾಟಲ್ ಇರುವ ಪ್ಯಾಕೆಟ್‍ಗಳನ್ನು ನೀಡಲಾಗುತ್ತದೆ.
ಇದಕ್ಕಾಗಿ ಪ್ರತಿದಿನ 12 ಟನ್ ಕೋಳಿ ಮಾಂಸ ಮತ್ತು 6 ಟನ್ ಕುರಿ ಮಾಂಸವನ್ನು ಬಳಸಲಾಗುತ್ತದೆ. ಅಲ್ಲದೇ ಅಕ್ಕಿ, ತರಕಾರಿಗಳು ಸೇರಿದಂತೆ 35 ಟನ್ ಆಹಾರ ಪದಾರ್ಥಗಳನ್ನು ಇಫ್ತಾರ್ ಕೂಟಕ್ಕಾಗಿ ಉಪಯೋಗಿಸಲಾಗುತ್ತದೆ.
ಗ್ರ್ಯಾಂಡ್ ಮಾಸ್ಕ್‍ದ ವಿಶಾಲ ಸಂಕೀರ್ಣದಲ್ಲಿ ಬೃಹತ್ ಡೇರೆಗಳನ್ನು ನಿರ್ಮಿಸಲಾಗಿದ್ದು, ಪ್ರತಿ ಬಿಡಾರದಲ್ಲೂ 1,500ಕ್ಕೂ ಹೆಚ್ಚು ಮಂದಿ ಕುಳಿತು ಭೋಜನ ಸೇವಿಸುವ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಪ್ರತಿದಿನ 35,000ಕ್ಕೂ ಹೆಚ್ಚು ಜನರಿಗೆ ಉಚಿತ ಭೋಜನ ಸಿದ್ದಪಡಿಸುವುದು ಸುಲಭದ ಕೆಲಸವಲ್ಲ. 350 ಬಾಣಸಿಗರು, 160 ಮೇಲ್ವಿಚಾರಕರು, 450 ಸೇವಾ ಸಿಬ್ಬಂದಿ ಹಾಗೂ ಸಾಕಷ್ಟು ಸಂಖ್ಯೆಯ ಸಹಾಯಕರು ಮುಂಜಾನೆಯಿಂದಲೇ ಅಡುಗೆ ತಯಾರಿಕೆ ಕಾರ್ಯದಲ್ಲಿ ತೊಡಗುತ್ತಾರೆ. ದೊಡ್ಡ ಅಡುಗೆ ಕೋಣೆಯಲ್ಲಿ ವಿವಿಧ ಕೆಲಸಗಳನ್ನು ನಿರ್ವಹಿಸಲು 1,000ಕ್ಕೂ ಹೆಚ್ಚು ಪರಿಚಾರಕರೂ ಇದ್ದಾರೆ.
ಪ್ರತಿದಿನ ಸಂಜೆ ಉಪವಾಸ ಅಂತ್ಯಗೊಳಿಸಿ ಭೋಜನಕ್ಕೆ ಬರುವ ಮಂದಿಯ ಇಫ್ತಾರ್ ಕೂಟಕ್ಕಾಗಿ ನಾವು 35,000ಕ್ಕೂ ಅಧಿಕ ಭೋಜನ ಪೆÇಟ್ಟಣಗಳನ್ನು ಸಿದ್ದಪಡಿಸುತ್ತೇವೆ. ಇದರಲ್ಲಿ ಮಾಂಸಾಹಾರ, ಸಸ್ಯಾಹಾರ, ಹಣ್ಣು ಹಂಪಲು, ಶುಷ್ಕಫಲ, ತಂಪು ಪಾನೀಯ ಮತ್ತು ನೀರಿನ ಬಾಟಲ್ ಇರುತ್ತದೆ. ಆಹಾರದ ಶುಚಿತ್ವ ಮತ್ತು ಸುರಕ್ಷತೆಗೆ ಆದ್ಯತೆ ನೀಡುತ್ತೇವೆ. ಅತ್ಯಂತ ವ್ಯವಸ್ಥಿತ ಮತ್ತು ಕ್ರಮಬದ್ಧವಾಗಿ ಇಷ್ಟು ಸಂಖ್ಯೆ ಜನರಿಗೆ ನಾವು ಈ ಸೇವೆ ಒದಗಿಸುತ್ತಿದ್ದೇವೆ ಎಂದು ಕಾರ್ಯಕಾರಿ ಬಾಣಸಿಗ ಕ್ಯಾಸ್ರ್ಟನ್ ಗೋಟ್ಸ್‍ಚಾಕ್ ಹೇಳಿದ್ದಾರೆ.