
ಉಡುಪಿ, ಮೇ 22- ಸುಮಾರು 2800 ವರ್ಷಗಳ ಹಳೆಯದಾದ ಗುಹಾ ಸಮಾಧಿಯೊಂದು ಪೇರಂಪಳ್ಳಿಯಲ್ಲಿ ಕಂಡು ಬಂದಿದೆ.
ಕಟೀಲು ದೇವಾಲಯ ಯಕ್ಷಗಾನ ಮೇಳದ ಅಂಗವಾಗಿ ಹರಿಕೃಷ್ಣ ಎಂಬುವರ ಮನೆಯ ಸಮೀಪ ನೆಲ ಸಮತಟ್ಟು ಮಾಡುವಾಗ ಆಳವಾದ ಗುಂಡಿ ಬಿದ್ದಿದೆ.
ಏನದು ಎಂದು ನೋಡಿದಾಗ ಅಪರೂಪದ ಸಮಾಧಿ ಕಂಡು ಬಂದಿದೆ. ಇದೊಂದು ಅಪರೂಪದ ವಿದ್ಯಮಾನ. ಈ ಹಿಂದೆ ಇಲ್ಲಿ ಬೆಳೆ ಬೆಳೆಯಲಾಗುತ್ತಿದ್ದು, ಆರೇಳು ಬಾರಿ ಇದೇ ಪ್ರದೇಶದಲ್ಲಿ ನಾವು ಯಕ್ಷಗಾನ ಪ್ರದರ್ಶನವನ್ನು ನೀಡಿದ್ದೇವೆ. ಆದರೆ ಇಂತಹ ಯಾವುದೇ ಸನ್ನಿವೇಶಗಳು ಎದುರಾಗಿರಲಿಲ್ಲ. ಆದರೆ ಈಗ ಜೆಸಿಬಿ ಬಳಸಿ ಒಂದು ವೇದಿಕೆ ನಿರ್ಮಿಸೋಣ ಎಂದು ನಿರ್ಧರಿಸಿ ಕಾಮಗಾರಿ ಕೈಗೊಂಡಾಗ ಇದು ಕಾಣಿಸಿಕೊಂಡಿದೆ. ಇದು ದೇವಿ ಮಹಿಮೆಯೋ ಅಥವಾ ನೈಸರ್ಗಿಕ ವಿಸ್ಮಯವೋ ಎಂಬುದು ತಿಳಿಯದಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕ್ರಿ.ಪೂ. 800 ವರ್ಷಗಳ ಹಿಂದೆಯೇ ಈ ರೀತಿಯ ಗುಹಾ ಸಮಾಧಿ ಮಾಡುವ ಪರಿಪಾಠವಿತ್ತು. ಮನುಷ್ಯ ಇಹ ಲೋಕ ತ್ಯಜಿಸಿದ ನಂತರ ಆತನ ಅಸ್ತಿಗಳನ್ನು ಹೂತು ಸಮಾಧಿ ಮಾಡಲಾಗುತ್ತಿತ್ತು. ಇಲ್ಲಿ ಸಿಕ್ಕಿರುವ ಮಡಿಕೆಯೂ ಕೂಡ ಶಿಲಾಯುಗದ ಕಾಲದ್ದೇ ಆಗಿದೆ. ಇತಿಹಾಸಕಾರರಿಗೆ ಇದು ಕುತೂಹಲ ಕೆರಳಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.