ಧರ್ಮಸ್ಥಳ:ಮೇ-22; ಜೆಡಿಎಸ್ ಗೆ ಪೂರ್ಣ ಬಹುಮತ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದೆ. ಆದರೆ ರಾಜ್ಯದ ಜನತೆ ಸಂಪೂರ್ಣ ಬಹುಮತ ನೀಡಿಲ್ಲ, ಪ್ರಮಾಣವಚನ ಸ್ವೀಕರಿಸಿ, ಬಹುಮತ ಸಾಬೀತುಪಡಿಸಿದ ಬಳಿಕ ರೈತರ ಸಾಲ ಮನ್ನಾ, ಲೋಕಾಯುಕ್ತ, ಎತ್ತಿನ ಹೊಳೆ ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ನಿಯೋಜಿತ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಅವರು, ನಾಡಿನ ನಿರೀಕ್ಷೆಗಳ ಬಗ್ಗೆ ದೇವರ ಬಳಿ ಪ್ರಾರ್ಥನೆ ಮಾಡಿರುವೆ. ನಾಡಿನಲ್ಲಿ ರೈತರಿಗೆ ಉತ್ತಮವಾದ ಮಳೆ-ಬೆಳೆ ಬಂದು ನಾಡಿನ ಸಮಸ್ಯೆಗಳು ಪರಿಹಾರವಾಗಬೇಕೆಂದು ದೇವರಲ್ಲಿ ಕೇಳಿಕೊಂಡಿದ್ದೇನೆ ಎಂದರು.
ಇದೇವೇಳೆ ರೈತರ ಸಾಲ ಮನ್ನಾ ಕುರಿತು ಮಾತನಾಡಿದ ಹೆಚ್ಡಿಕೆ, ನನಗೆ ಸಂಪೂರ್ಣ ಬಹುಮತ ಕೊಟ್ಟಿಲ್ಲ. ಪೂರ್ಣ ಬಹುಮತ ಕೊಟ್ಟಿದ್ದರೆ ಸಂಪೂರ್ಣ ಸಾಲ ಮನ್ನಾ ಎಂದಿದ್ದೆ. ಆದರೆ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರುವೆ ಎನ್ನುವ ಮೂಲಕ ಸಾಲ ಮನ್ನಾ ಕುರಿತು ಗೊಂದಲದ ಹೇಳಿಕೆ ನೀಡಿದ್ದಾರೆ.
ಇನ್ನು ಮಂಗಳೂರು ಕರಾವಳಿ ಜನತೆ ಸೌಹಾರ್ದತೆಯಿಂದ ಬದುಕಬೇಕು ಕ್ಷುಲ್ಲಕ ವಿಚಾರದಲ್ಲಿ ದ್ವೇಷ ಮಾಡಿ ಅಮಾಯಕರ ಬಲಿ ಬೇಡ ಏನೇ ಸಮಸ್ಯೆ ಇದ್ದರೂ, ನನಗೆ ಕರೆ ಮಾಡಿ ಭಾವೋದ್ವೇಗದ ವಿಚಾರಕ್ಕೆ ಒತ್ತು ಕೊಡಬೇಡಿ ಯಾವುದೇ ಕಾರಣಕ್ಕೂ ಸಂಘರ್ಷಕ್ಕೆ ಎಡೆಮಾಡಬೇಡಿ ಎಂದು ಮನವಿ ಮಾಡಿದರು.
ಇದೇವೇಳೆ ಹಲವಾರು ಜನ ಅಪವಿತ್ರ ಮೈತ್ರಿ ಅಂದಿದ್ದಾರೆ ಇಲ್ಲಿ ಪವಿತ್ರ ಅಪವಿತ್ರ ಮಾತು ಬರೋದಿಲ್ಲ ಶಾಸಕರ ಸಂಖ್ಯಾಬಲ ಇದ್ರೆ ಸರ್ಕಾರ ಉಳಿಯುತ್ತದೆ ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.