ವಾಷಿಂಗ್ಟನ್, ಮೇ 21-ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಕಿಶನ್ಗಂಗಾ ಜಲವಿದ್ಯುತ್ ಯೋಜನೆ ಈಗ ಭಾರತ ಮತ್ತು ಪಾಕಿಸ್ತಾನ ನಡುವೆ ವಿವಾದವಾಗಿ ಪರಿಣಮಿಸಿದೆ.
ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದವನ್ನಾಗಿಸಲು ಸಜ್ಜಾಗಿರುವ ಪಾಕಿಸ್ತಾನ, ವಾಷಿಂಗ್ಟನ್ನಲ್ಲಿರುವ ವಿಶ್ವಬ್ಯಾಂಕ್ನಲ್ಲಿ ಈ ವಿಚಾರವನ್ನು ಕೆದಕಿ ದೊಡ್ಡದು ಮಾಡುತ್ತಿದೆ.
ಭಾರತದ ಈ ಕ್ರಮವು 1960ರ ಸಿಂಧು ಜಲ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಪಾಕಿಸ್ತಾನ ವಿಶ್ವ ಬ್ಯಾಂಕ್ನಲ್ಲಿ ಆರೋಪಿಸಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಕಿಶನ್ಗಂಗಾ ಜಲ ವಿದ್ಯುತ್ ಯೋಜನೆಗೆ ಸಂಬಂಧಪಟ್ಟಂತೆ ನಾಲ್ಕು ವಿಷಯಗಳನ್ನು ಪಾಕ್ ವಿಶ್ವ ಬ್ಯಾಂಕ್ನಲ್ಲಿ ಪ್ರಸ್ತಾಪಿಸಿದೆ. ಅಣೆಕಟ್ಟೆಯ ಎತ್ತರ, ಅದರಲ್ಲಿ ಸಂಗ್ರಹಿಸಿಡಬಹುದಾದ ನೀರಿನ ಪ್ರಮಾಣ, ಮಧ್ಯಸ್ಥಿಕೆ ನ್ಯಾಯಾಲಯದ ರಚನೆ ಹಾಗೂ ಈ ವಿಷಯ ಕುರಿತು ವಿವರಿಸಲು ಅಂತಾರಾಷ್ಟ್ರೀಯ ತಜ್ಞರಿಗೆ ಭಾರತದ ಆಹ್ವಾನ-ಈ ವಿಚಾರಗಳನ್ನು ತನ್ನ ಅರ್ಜಿಯಲ್ಲಿ ಪಾಕಿಸ್ತಾನ ಉಲ್ಲೇಖಿಸಿದೆ.
ಪಾಕಿಸ್ತಾನದ ಉನ್ನತ ಮಟ್ಟಡ ನಿಯೋಗ ಈಗಾಗಲೇ ವಾಷಿಂಗ್ಟನ್ನಲ್ಲಿರುವ ಡಬ್ಲ್ಯೂಬಿ ಕೇಂದ್ರ ಕಚೇರಿ ತಲುಪಿದೆ. ಪಾಕಿಸ್ತಾನದ ಪ್ರಸ್ತಾಪ ಸಲ್ಲಿಕೆ ನಂತರ ಭಾರತವು ಇದಕ್ಕೆ ಸಮರ್ಥನೆ ನೀಡಿ ನ್ಯಾಯಸಮ್ಮತ ಹೋರಾಟಕ್ಕೆ ಸಿದ್ಧವಾಗಿದೆ.